ನೆಲಮಂಗಲ : ರಾಜ್ಯದಲ್ಲಿರುವ ಪತ್ರಕರ್ತರ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಬೆಳಗಾವಿ ಅಧಿವೇಶನದಲ್ಲಿ ಪ್ರತಿಭಟನೆಯನ್ನು ಸಹ ನಡೆಸಿದ್ದೆವು. ಈಗಾಗಲೇ ರಾಜ್ಯದ ಮುಖ್ಯಮಂತ್ರಿ ಗಮನಕ್ಕೆ ತರಲಾಗಿದ್ದು. ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನಮ್ಮ ಸಮಸ್ಯೆ ಬಗೆಹರಿಯದಿದ್ದರೆ ಕಾನೂನು ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಹೇಳಿಕೆ ನೀಡಿದರು.
ನೆಲಮಂಗಲ ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಕೆಡಬ್ಲ್ಯೂ ಜೆ ವಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ನೂತನ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಹಾಗೂ 2ನೇ ರಾಜ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಜನವರಿ ತಿಂಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಲಯದಲ್ಲಿ ರಿಟ್ ಪಿಟಿಷನ್, ಸಿಎಂ ಸಿದ್ದರಾಮಯ್ಯ ವಿರುದ್ಧ ಪಿಐಎಲ್ ಸೇರಿದಂತೆ ಮಾನ್ಯತಾ ಪತ್ರ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ವಾರ್ತಾ ಇಲಾಖೆಯ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ ಹಮ್ಮಿಕೊಳ್ಳಲಾಗು ವುದು ಎಂದು ಹೇಳಿದರು ರಾಜ್ಯದ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಮತ್ತು 800ಕ್ಕೂ ಅಧಿಕ ಪತ್ರಿಕೆಗಳು ಮಾನ್ಯತೆ ಪಡೆದಿದ್ದು, ಕಾರ್ಮಿಕ ಇಲಾಖೆಯಲ್ಲಿ ನೊಂದಣಿ ಆಗಿಲ್ಲ. ಈ ರೀತಿ ನೋಂದಣಿ ಅಗದ ಕಾರಣ ಅವರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಪಡೆದು ಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಹೇಳಿದರು.
ರಾಜ್ಯ ಸರ್ಕಾರದಿಂದ ಪತ್ರಕರ್ತರು ಪಡೆಯಬೇಕಾದ ಸವಲತ್ತುಗಳನ್ನು ಪಡೆಯಲು ಎಲ್ಲಾ ಸಂಘಟನೆಗಳು ಒಂದಾಗಬೇಕು. ಈಗಾಗಲೇ ಹಲವಾರು ಬಾರಿ ಪತ್ರಕರ್ತರ ಸಮಸ್ಯೆ ಕುರಿತು ಮುಖ್ಯ ಮಂತ್ರಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಪತ್ರಕರ್ತರ ಸಮಸ್ಯೆ ಬಗೆಹರಿಯದಿದ್ದರೆ ಅತಿ ಶೀಘ್ರದಲ್ಲಿ ವಾರ್ತಾ ಇಲಾಖೆ ಕಚೇರಿಯ ಮುಂದೆ ಪ್ರತಿಭಟನೆಯನ್ನು ಸಹ ನಡೆಸುತ್ತೇವೆ ಎಂದರು.
ಸಾಹಿತಿ ಮಣ್ಣೇ ಮೋಹನ್ ಮಾತನಾಡಿ ಪತ್ರಿಕೆಗಳು ಪ್ರಾದೇಶಿಕವಾಗಿ ಹೊರ ಬರಬಹುದು. ಆದರೆ ಪತ್ರಕರ್ತರು ಪ್ರಾದೇಶಿಕವಾಗಬಾರದು ಪತ್ರಕರ್ತ ಅಖಂಡ ಕರ್ನಾಟಕದ ಪತ್ರಕರ್ತನಾಗಬೇಕು. ಅಖಂಡ ಕರ್ನಾಟಕದ ಬಗ್ಗೆ ಚಿಂತನೆ ನಡೆಸಿದಾಗ ಮಾತ್ರ ಸಂಪೂರ್ಣ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯ. ಓದುಗನೇ ಈಗ ಪತ್ರಕರ್ತರಾಗಿರುವ ಕಾಲಘಟ್ಟದಲ್ಲಿ. ಈ ವೃತ್ತಿಯನ್ನು ಗಟ್ಟಿಗೊಳಿಸುವ ಪ್ರಯತ್ನದ ಭಾಗವಾಗಿ ಪತ್ರಕರ್ತರು ವಿಶ್ವಾಸಾರ್ಹತೆ ಮತ್ತು ಬದ್ಧತೆಯನ್ನು ಪ್ರದರ್ಶಿಸುವ ಮೂಲಕ ವೃತ್ತಿಗೆ ಗೌರವ ಹೆಚ್ಚಿಸಬೇಕು. ಸ್ವಾತಂತ್ರ್ಯ ಪೂರ್ವದಲ್ಲಿದ್ದ ಸಮಾಜಪರ ಕಾಳಜಿ ಹಾಗೂ ಆಶಯಗಳನ್ನು ಮತ್ತೆ ಅಳವಡಿಸಿಕೊಳ್ಳುವ ಕಾಲ ಸನ್ನಿಹಿತವಾಗಿದೆ. ದೇಶದ ಸ್ವಾತಂತ್ರ್ಯದ ನೇತೃತ್ವ ವಹಿಸಿದ್ದ ಗಾಂಧೀಜಿ ಹಾಗೂ ಅಂಬೇಡ್ಕರ್ ಅವರು ಸಹ ಪತ್ರಕರ್ತರಾಗಿದ್ದರು. ಅವರು ದೇಶದ ಬಗ್ಗೆ ತಮ್ಮದೇ ಆದ ಕನಸು ಕಂಡಿದ್ದರು. ಅವರ ಕನಸುಗಳನ್ನು ನನಸು ಮಾಡಲು ಪತ್ರಕರ್ತರು ಒಂದಾಗಬೇಕು ಎಂದರು.