ಮಕ್ಕಳಿಂದ ಹಿಡಿದು ಅನೇಕ ವೃದ್ಧರವರೆಗೆ ಬಹುತೇಕರಿಗೆ ಟೈಂ ಪಾಸ್ ಅಂದ್ರೆ ಅದು ಮೊಬೈಲ್. ಅಕ್ಕಪಕ್ಕದಲ್ಲಿ ಯಾರೇ ಇರಲಿ, ಏನೇ ಇರಲಿ, ಜನರು ಅದಕ್ಕೆ ಮಹತ್ವ ನೀಡೋದಿಲ್ಲ. ಮನೆಯಲ್ಲಿರುವ ವ್ಯಕ್ತಿಗಳು ಅಕ್ಕಪಕ್ಕದಲ್ಲೇ ಕುಳಿತು ಚಾಟ್ ಮಾಡುವ ಸ್ಥಿತಿ ಈಗ ನಿರ್ಮಾಣವಾಗಿದೆ.
ಮೊಬೈಲ್ ನಲ್ಲಿ ಬರಿ ಚಾಟಿಂಗ್ ಮಾತ್ರವಲ್ಲ ಗೇಮ್ ಸೇರಿದಂತೆ ಅನೇಕಾನೇಕ ಕೆಲಸಗಳನ್ನು ಮಾಡ್ತಾರೆ ಜನರು. ಸಾಮಾಜಿಕ ಜಾಲತಾಣಗಳನ್ನು ಸ್ಕ್ರೋಲ್ ಮಾಡ್ತಾ ಹೋದಂತೆ ಸಮಯ ಸರಿದಿದ್ದು ಜನರಿಗೆ ತಿಳಿಯೋದಿಲ್ಲ. ಈ ಮೊಬೈಲ್ ಗೇಮಿಂಗ್ , ಸಾಮಾಜಿಕ ಜಾಲತಾಣ ವೀಕ್ಷಣೆ ಈಗಿನ ದಿನಗಳಲ್ಲಿ ಹೊಸ ಹೊಸ ರೋಗಕ್ಕೆ ಕಾರಣವಾಗ್ತಿದೆ. ನೀವೂ ಮೊಬೈಲ್ ವೀಕ್ಷಣೆ ಮಾಡ್ತಿದ್ದರೆ ಯಾವೆಲ್ಲ ಸಮಸ್ಯೆ ನಿಮ್ಮನ್ನು ಕಾಡುತ್ತೆ ಎಂಬುದನ್ನು ತಿಳಿದುಕೊಳ್ಳಿ.
ನಿರಂತರ ಮೊಬೈಲ್ ವೀಕ್ಷಣೆಯಿಂದ ನಿಮ್ಮನ್ನು ಕಾಡುತ್ತೆ ಈ ಸಮಸ್ಯೆ :
ಕುತ್ತಿಗೆ ನೋವು : ಬೆನ್ನುಮೂಳೆಯ ಶಸ್ತ್ರಚಿಕಿತ್ಸಕರ ಪ್ರಕಾರ, ಸ್ಮಾರ್ಟ್ಫೋನ್ನಲ್ಲಿ ಪೋಸ್ಟ್ಗಳನ್ನು ನೋಡುವಾಗ ಅಥವಾ ಸ್ಕ್ರೋಲಿಂಗ್ ಮಾಡುವಾಗ ತಲೆ ಮತ್ತು ಕುತ್ತಿಗೆ ಬಾಗಿರುತ್ತದೆ. ಕುತ್ತಿಗೆಯ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಇಂತಹ ಪರಿಸ್ಥಿತಿಯು ದೀರ್ಘಕಾಲದವರೆಗೆ ಮುಂದುವರಿದರೆ ಕುತ್ತಿಗೆಯ ಸ್ನಾಯುಗಳು ಊದಿಕೊಳ್ಳುತ್ತವೆ. ಇದರಿಂದ ಕಿರಿಕಿರಿಯಾಗಲು ಶುರುವಾಗುತ್ತದೆ. ಇದನ್ನು ಟೆಕ್ಸ್ಟ್ ನೆಕ್ ಎಂದು ಕರೆಯಲಾಗುತ್ತದೆ. ನಮ್ಮ ಕಣ್ಣಿನ ನೇರಕ್ಕೆ ಮೊಬೈಲ್ ಇಟ್ಟು ವೀಕ್ಷಣೆ ಮಾಡೋದ್ರಿಂದ ಈ ಸಮಸ್ಯೆ ನಮ್ಮನ್ನು ಕಾಡೋದಿಲ್ಲ
ಗೇಮಿಂಗ್ ಡಿಸಾರ್ಡರ್ : ಈಗಿನ ದಿನಗಳಲ್ಲಿ ಆನ್ಲೈನ್ ಗೇಮಿಂಗ್ ಹೆಚ್ಚಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಪಂಚದಾದ್ಯಂತ ಅತಿಯಾದ ಆನ್ಲೈನ್ ಗೇಮಿಂಗ್ ಅನ್ನು ಮಾನಸಿಕ ಕಾಯಿಲೆ ಎಂದು ಒಪ್ಪಿಕೊಂಡಿದೆ. ಗೇಮಿಂಗ್ ಹುಚ್ಚಿಗೆ ಬೀಳುವ ಜನರು ದೈನಂದಿನ ಕೆಲಸಕ್ಕಿಂತ ವಿಡಿಯೋ ಗೇಮ್ ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಾರೆ. ಈ ಗೇಮಿಂಗ್ ಅಭ್ಯಾಸವುಳ್ಳ ವ್ಯಕ್ತಿಯ ನಿದ್ರೆ ಸಮಯ ನಿಧಾನವಾಗಿ ಕಡಿಮೆ ಆಗುತ್ತದೆ. ಸಮಾಜದ ಜೊತೆ ಆತ ಬೆರೆಯೋದಿಲ್ಲ. ಮೊಬೈಲ್ ನಲ್ಲಿ ಆಟವಾಡುವ ಶೇಕಡಾ ಹತ್ತರಷ್ಟು ಮಂದಿ ಈ ಗೇಮಿಂಗ್ ಡಿಸಾರ್ಡರ್ ಗೆ ಒಳಗಾಗ್ತಾರೆ ಎಂದು ತಜ್ಞರು ಹೇಳಿದ್ದಾರೆ.
ನೋಮೋಫೋಬಿಯಾ ಸಮಸ್ಯೆ : ದೀರ್ಘಕಾಲ ಮೊಬೈಲ್ ಬಳಕೆ ಮಾಡದೆ ಇದ್ದಾಗ ಈ ಸಮಸ್ಯೆ ನಿಮ್ಮನ್ನು ಕಾಡುತ್ತದೆ. ಒಂದು ಸಮೀಕ್ಷೆಯ ಪ್ರಕಾರ, ಸುಮಾರು 53 ಪ್ರತಿಶತ ಜನರು ಮೊಬೈಲ್ ಫೋನ್ಗಳನ್ನು ಬಳಸದಿದ್ದರೆ ಪ್ರಕ್ಷುಬ್ಧತೆಯನ್ನು ಅನುಭವಿಸಲು ಪ್ರಾರಂಭಿಸುತ್ತಾರೆ. ವಿಪರೀತ ಪರಿಸ್ಥಿತಿಗಳಲ್ಲಿ ಅವರು ಪ್ಯಾನಿಕ್ ಅಟ್ಯಾಕ್ಗೆ ಒಳಗಾಗಬಹುದು.