ಗದಗ: ಇದೀಗ ಎಲ್ಲೆಲ್ಲೂ ಚಳಿಯದ್ದೇ ಮಾತು. ಮನೆಯಿಂದ ಹೊರ ಗೋಗಬೇಕಂದ್ರೆ ಸ್ವೆಟರ್, ತಲೆಗೆ ಟೋಪಿ ಇಲ್ಲದೇ ಓಡಾಡೋಕೆ ಆಗೋದೆ ಇಲ್ಲ. ಇಂತಹ ಚಳಿಯ ನಡುವೆಯೂ ಕಡು ಬಡವರು, ಬೀದಿಬದಿ ನಿರ್ಗತಿಕರು, ಭಿಕ್ಷುಕರು ಎಲ್ಲಾದ್ರೂ ಸ್ವಲ್ಪ ಮಲಗೋಕೆ ಜಾಗ ಸಿಕ್ರೆ ಸಾಕು ಅಂತಾ ಬಸ್ ನಿಲ್ದಾಣ, ರೈಲು ನಿಲ್ದಾಣ, ಮಠಗಳ ಆವರಣ, ರಸ್ತೆಬದಿ ನಡುಗುತ್ತಾ ಮಲಗಿರ್ತಾರೆ. ಅಂತಹವರನ್ನ ಹುಡುಕಿ ಅವರಿದ್ದಲ್ಲಿಗೇ ತೆರಳಿ ಬೆಚ್ಚಗಿನ ಹೊದಿಕೆ ವಿತರಿಸೋ ಕಾರ್ಯವನ್ನ ಗದಗ ಬೆಟಗೇರಿ ಎ ಎಸ್ ಎಸ್ ಕಾಲೇಜಿನ ಎನ್ ಎಸ್ ಎಸ್ ಘಟಕದಿಂದ ಮಾಡಲಾಗ್ತಿದೆ.
ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಫ್ರೊ. ಬಾಹುಬಲಿ ಜೈನರ್ ಅವರ ಮಾರ್ಗದರ್ಶನದಲ್ಲಿ ಎನ್ ಎಸ್ ಎಸ್ ಸ್ವಯಂ ಸೇವಕರು ಕಳೆದ 3 ದಿನಗಳಿಂದ ಗದಗ-ಬೆಟಗೇರಿ ಅವಳಿ ನಗರದಲ್ಲಿ ಸಂಚರಿಸಿ ಚಳಿಯಿಂದ ಬಳಲುತ್ತಿರೋ ನಿರ್ಗತಿಕರಿಗೆ ಬೆಚ್ಚಗಿನ ಹೊದಿಕೆಗಳನ್ನ ವಿತರಣೆ ಮಾಡ್ತಿದ್ದಾರೆ. ಆ ಮೂಲಕ ಮೂಲಕ ವಿದ್ಯಾರ್ಥಿ ಜೀವನದಿಂದಲೇ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.