ದಾವಣಗೆರೆ: ಜಮಾಪುರ ಮುಖ್ಯರಸ್ತೆಯ ಆನಗೋಡಿನಲ್ಲಿ ತೀವ್ರ ಬರದಿಂದ ಸಂಪೂರ್ಣ ಬೆಳೆ ಹಾನಿಗೊಳಗಾಗಿರುವ ರೈತರ ಜಮೀನುಗಳಿಗೆ ಬಿವೈ ವಿಜಯೇಂದ್ರ ನೇತೃತ್ವದ ಬಿಜೆಪಿ ತಂಡ ಭೇಟಿ ನೀಡಿ ಸ್ಥಳ ಪರಿವೀಕ್ಷಣೆ ನಡೆಸಿ, ಸಂಕಷ್ಟದಲ್ಲಿರುವ ರೈತರಿಗೆ ಸಾಂತ್ವನ ಹೇಳಿತು. ಮಾಯಕೊಂಡ ಕ್ಷೇತ್ರದ ಜಮಾಪುರ ಬಳಿ ಸಿದ್ದಮ್ಮ ಮತ್ತು ಮರುಳಪ್ಪ ಎಂಬ ದಲಿತ ರೈತ ದಂಪತಿ ಬೆಳೆದಿದ್ದ ಮೆಕ್ಕೆಜೋಳ ಬೆಳೆ ಹಾನಿಗೊಳಗಾದ ಬಗ್ಗೆ ವಿಜಯೇಂದ್ರ ಮಾಹಿತಿ ಪಡೆದರು.
ಈ ವೇಳೆ ಬೆಳೆ ಹಾಳಾಗಿದ್ದರಿಂದ ಅನುಭವಿಸುತ್ತಿರುವ ಆರ್ಥಿಕ ನಷ್ಟದ ಬಗ್ಗೆ ರೈತ ದಂಪತಿ ಅಳಲು ತೋಡಿಕೊಂಡರು. ನಾಲ್ಕು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಹಾಳಾಗಿದೆ ಎಂದು ತಿಳಿಸಿದರು. ರಾಜ್ಯದ ಬೆಳೆ ಪರಿಹಾರ, ಕೇಂದ್ರದ ಪರಿಹಾರ ಧನ ಪಡೆದ ಬಗ್ಗೆ ವಿಜಯೇಂದ್ರ ಪ್ರಶ್ನಿಸಿದಾಗ ಕೇಂದ್ರದ ಕಿಸಾನ್ ಸಮ್ಮಾನ್ ಸೇರಿ ಯಾವುದೇ ಪರಿಹಾರ ಬಂದಿಲ್ಲ ಎಂದು ದಂಪತಿ ಕಣ್ಣೀರು ಹಾರಿದರು.