ಬೆಂಗಳೂರು : ನಾನು ರಾಮಜನ್ಮ ಭೂಮಿ ಹೋರಾಟದಲ್ಲಿ ಭಾಗವಹಿಸಿದ್ದೆ, ನನ್ನನ್ನು ಬಂಧಿಸುತ್ತಿರಾ? ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕಿಡಿಕಾರಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ದಶಕಗಳ ಹಿಂದೆ ರಾಮಜನ್ಮ ಭೂಮಿ ಹೋರಾಟದಲ್ಲಿ ಪಾಲ್ಗೊಂಡ ಇಬ್ಬರು ಕಾರ್ಯಕರ್ತರ ವಿರುದ್ಧದ ಕೇಸ್ ಮರುತೆರೆದು, ಬಂಧಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಮತ್ತೆ ದ್ವೇಷದ ರಾಜಕಾರಣ ಶುರು ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಹಿಂದೂಗಳ ಕಗ್ಗೊಲೆಗಳು ಆಗಿದ್ದವು. ರಾಮಮಂದಿರ ನಿರ್ಮಾಣ ಚರಿತ್ರೆಯಲ್ಲಿ ದಾಖಲಾಗುವ ಐತಿಹಾಸಿಕ ಕ್ಷಣ. ನಾವು ಕರ ಸೇವೆ ಮಾಡಿದ್ದೇವೆ, ಹಲವರು ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ, ಕಾಂಗ್ರೆಸ್ ಸರ್ಕಾರ ಈಗ ಕರ ಸೇವಕರನ್ನ ಭಯಭೀತಗೊಳಿಸಲು ಹೊರಟಿದೆ ಎಂದು ಕುಟುಕಿದ್ದಾರೆ.
30 ವರ್ಷಗಳ ಬಳಿಕ ಹುಬ್ಬಳ್ಳಿಯಲ್ಲಿ ರಾಮಜನ್ಮ ಭೂಮಿ ಕಾರ್ಯಕರ್ತರನ್ನ ಜೈಲುಗಟ್ಟಿದ್ದಾರೆ. ರಾಮಭಕ್ತರ ಮೇಲೆ ಕೇಸ್ ಹಾಕಿದ್ದಾರೆ. ದ್ವೇಷದ ರಾಜಕಾರಣಕ್ಕೆ ಸರ್ಕಾರ ಪ್ರತಿಫಲ ಅನುಭವಿಸುತ್ತೆ. ನಾನು ರಾಮಜನ್ಮ ಭೂಮಿ ಹೋರಾಟದಲ್ಲಿ ಭಾಗವಹಿಸಿದ್ದೆ, ನನ್ನನ್ನ ಬಂಧಿಸ್ತಿರಾ..? ಯಡಿಯೂರಪ್ಪ ಅವರು ಕೂಡ ರಾಮಜನ್ಮ ಭೂಮಿ ಹೋರಾಟಕ್ಕೆ ಹೋಗಿದ್ದರು. ರಾಮಭಕ್ತರ ಬಂಧನ ಸರ್ಕಾರದ ಟಿಪ್ಪು ಸಂಸ್ಕೃತಿಯನ್ನ ತೋರಿಸುತ್ತೆ ಎಂದು ಹರಿಹಾಯ್ದಿದ್ದಾರೆ.