ದರ್ಶನ್ (Darshan) ನಟನೆಯ ಕಾಟೇರ (Katera) ಸಿನಿಮಾ ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಅಲ್ಲದೇ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗುತ್ತಿದೆ. ಸಿನಿಮಾ ರಂಗದ ಅನೇಕ ಗಣ್ಯರಷ್ಟೇ ಅಲ್ಲ, ರಾಜಕಾರಣಿಗಳು ಕೂಡ ಸಿನಿಮಾ ವೀಕ್ಷಿಸಿ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಕಾಟೇರ ಸಿನಿಮಾ ವೀಕ್ಷಣೆ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi), ದರ್ಶನ್ ನಟನೆಗೆ ಫುಲ್ ಫಿದಾ ಆಗಿದ್ದಾರೆ. ಚಿತ್ರತಂಡಕ್ಕೂ ಶುಭಾಶಯ ತಿಳಿಸಿದ್ದಾರೆ.
ಈ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಜೋಶಿ, ‘ಚಂದನವನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಕ್ಲೈನ್ ವೆಂಕಟೇಶ ಅವರ ನಿರ್ಮಾಣದಲ್ಲಿ ತರುಣ್ ಸುಧೀರ್ ಅವರ ನಿರ್ದೇಶನದಲ್ಲಿ ಮೂಡಿಬಂದ ಕಾಟೇರ ಚಲನಚಿತ್ರವನ್ನು ಹುಬ್ಬಳ್ಳಿಯಲ್ಲಿ ವೀಕ್ಷಿಸಿದೆನು. ರೈತರಿಗೆ ಪ್ರತಿಯೊಬ್ಬರೂ ನೀಡಬೇಕಾದ ಪ್ರಾಮುಖ್ಯತೆ, ಸಮಾಜದಲ್ಲಿ ಸರ್ವರನ್ನೂ ಸಮಾನವಾಗಿ ಕಾಣಬೇಕೆನ್ನುವ ಸಂದೇಶವನ್ನು ಚಲನಚಿತ್ರದ ಮೂಲಕ ಅಚ್ಚುಕಟ್ಟಾಗಿ ಅದ್ಭುತವಾಗಿ ತೋರಿಸಲಾಗಿದೆ. ದರ್ಶನ್ ಅವರ ಅದ್ಭುತ ನಟನೆ ಅಭಿಮಾನಿಗಳನ್ನು ಚಲನಚಿತ್ರ ಪ್ರಿಯರನ್ನು ಮತ್ತೊಮ್ಮೆ ರಂಜಿಸುವುದರ ಜೊತೆಗೆ ಹೊಸ ಸಂದೇಶವನ್ನು ಸಾರಿದ್ದಾರೆ. ಚಲನಚಿತ್ರ ಯಶಸ್ಸು ಕಾಣಲಿ ಎಂದು ಕಾಟೇರ ಚಲನಚಿತ್ರ ತಂಡಕ್ಕೆ ಶುಭ ಹಾರೈಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.