ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಅವರು ಸೋಮವಾರ (ಜನವರಿ 1) ತಮ್ಮ ಏಕದಿನ ಕ್ರಿಕೆಟ್ ವೃತ್ತಿ ಜೀವನಕ್ಕೆ ಹಠಾತ್ ವಿದಾಯ ಘೋಷಿಸಿದ್ದಾರೆ. ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದ ವಿದಾಯ ಪಂದ್ಯ ಆಡುವ 2 ದಿನಗಳ ಮುನ್ನ ವಾರ್ನರ್ ತೆಗೆದುಕೊಂಡಿರುವ ಈ ನಿರ್ಧಾರದಿಂದ ಅಭಿಮಾನಿಗಳು ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಗೆ ಆಘಾತವಾಗಿದೆ.
ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುವ ದೃಷ್ಟಿಯಿಂದ ವಾರ್ನರ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 565 ರನ್ ಗಳಿಸಿ ಆಸ್ಟ್ರೇಲಿಯಾ ಟ್ರೋಫಿ ಗೆಲ್ಲುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ವಾರ್ನರ್, ಒಟ್ಟಾರೆ 161 ಏಕದಿನ ಪಂದ್ಯಗಳಿಂದ 6932 ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟ್ಗೆ ವಿದಾಯ ಹೇಳಿದ್ದರೂ 2025 ರಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವುದಾಗಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಹೇಳಿದ್ದಾರೆ.
ಸಿಡ್ನಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ತಮ್ಮ ಏಕದಿನ ನಿವೃತ್ತಿಯ ಬಗ್ಗೆ ಘೋಷಿಸಿದ್ದಾರೆ.
“ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುವ ಸಲುವಾಗಿ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಏಕದಿನ ವಿಶ್ವಕಪ್ ಟೂರ್ನಿಯ ಸಮಯದಲ್ಲೇ ನಾನು ಈ ಬಗ್ಗೆ ಕ್ರಿಕೆಟ್ ಮಂಡಳಿಗೆ ತಿಳಿಸಿದ್ದೆ. ಭಾರತದ ವಿರುದ್ಧ ಅದರ ನೆಲದಲ್ಲೇ ವಿಶ್ವಕಪ್ ಗೆದ್ದಿರುವುದು ದೊಡ್ಡ ಸಾಧನೆಯಾಗಿದೆ,” ಎಂದು ಆರಂಭಿಕ ಆಟಗಾರ ಹೇಳಿದ್ದಾರೆ.