ಹೊಸದಿಲ್ಲಿ: ಟೀಮ್ ಇಂಡಿಯಾದ ಫಾಸ್ಟ್ ಬೌಲಿಂಗ್ ಆಲ್ ರೌಂಡರ್ ಶಾರ್ದುಲ್ ಠಾಕೂರ್ ಅವರು ಸೆಂಚೂರಿಯನ್ ನಲ್ಲಿ ಅಭ್ಯಾಸ ನಡೆಸುವ ವೇಳೆ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಬ್ಯಾಟಿಂಗ್ ಕೋಚ್ ವಿಕ್ರಮ್ ರಾಠೋಡ್ ರಿಂದ ಥ್ರೋಡೌನ್ ಗಳನ್ನು ಎದುರಿಸುವಾಗ ಶಾರ್ದುಲ್ ಠಾಕೂರ್ ತಮ್ಮ ಎಡಭುಜಕ್ಕೆ ಚೆಂಡನ್ನು ತಗುಲಿಸಿಕೊಂಡು ಗಾಯದ ಸಮಸ್ಯೆಗೆ ಸಿಲುಕಿದ್ದಾರೆ.
ಸೆಂಚೂರಿಯನ್ ನ ಸೂಪರ್ ಸ್ಪೋರ್ಟ್ಸ್ ಪಾರ್ಕ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 32 ರನ್ ಗಳ ಸೋಲು ಕಂಡಿರುವ ರೋಹಿತ್ ಶರ್ಮಾ ಪಡೆ, ಸರಣಿಯನ್ನು 1-1 ಸಮಬಲಗೊಳಿಸಲು ಜನವರಿ 3ರಿಂದ ಕೇಪ್ಟೌನ್ನ ನ್ಯೂಲೆಂಡ್ಸ್ ಕ್ರೀಡಾಂಗಣದಲ್ಲಿ ನಡೆಯುವ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ಈ ನಡುವೆ ಶಾರ್ದೂಲ್ ಠಾಕೂರ್ ಅವರ ಗಾಯದ ಸಮಸ್ಯೆಯು ತಂಡದ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುವ ಸಾಧ್ಯತೆಗಳಿವೆ.
ಸದ್ಯ ಶಾರ್ದುಲ್ ಠಾಕೂರ್ ಅವರ ಗಾಯದ ಪ್ರಮಾಣದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ನೋವು ಹೆಚ್ಚಾದರೆ ಸ್ಕ್ಯಾನಿಂಗ್ ಗೆ ಒಳಪಡಿಸಲಾಗುವುದು ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿವೆ. ಗಾಯದ ಸಮಸ್ಯೆ ಹೆಚ್ಚಾದರೆ ಶಾರ್ದುಲ್ ಠಾಕೂರ್ ಜನವರಿ 3ರಿಂದ ನಡೆಯಲಿರುವ ಕೇಪ್ ಟೌನ್ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದು, ಬೌಲಿಂಗ್ ಸಮಸ್ಯೆ ಎದುರಿಸುತ್ತಿರುವ ಭಾರತ ತಂಡಕ್ಕೆ ದೊಡ್ಡ ಆಘಾತವಾಗಲಿದೆ.