ಅಯೋಧ್ಯೆ: 2024ರ ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮಮಂದಿರ (Sri Ram Mandir) ಉದ್ಘಾಟನೆ ನೆರವೇರಲಿದೆ. ಎಲ್ಲೆಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿರುವ ರಾಮಲಲ್ಲಾನ ಅಭಿಷೇಕಕ್ಕೆ ನೇಪಾಳದಿಂದ 16 ಪವಿತ್ರ ನದಿಗಳ ನೀರನ್ನು ತರಿಸಲಾಗಿದೆ.
ಹೌದು. ಜನವರಿ 22 ರಂದು ಅಯೋಧ್ಯೆಯ (Ayodhya) ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೇ ಪ್ರಾಣ ಪ್ರತಿಷ್ಠಾಪನೆಗಾಗಿ ನೇಪಾಳ ವಿವಿಧ ರೀತಿಯ ಆಭರಣಗಳು, ವಸ್ತುಗಳು, ವಸ್ತ್ರ ಹಾಗೂ ಸಿಹಿ ತಿನಿಸುಗಳು ಸೇರಿ ಹಲವು ಸ್ಮರಣಿಕೆಗಳನ್ನು ಕಳುಹಿಸಲು ಸಜ್ಜಾಗಿದೆ. ಇದರೊಂದಿಗೆ ರಾಮಲಲ್ಲಾನ ಜಲಾಭಿಷೇಕಕ್ಕೆ ನೇಪಾಳದ ಪವಿತ್ರ ನದಿಗಳಿಂದಲೇ (Nepal Rivers Water) ನೀರನ್ನು ತರಿಸಿರುವುದು ವಿಶೇಷ, ಇದಕ್ಕೆ ಕಾರಣವೂ ಇದೆ.
ನೇಪಾಳ ನದಿಗಳ ನೀರು ಏಕೆ?
ಅಯೋಧ್ಯೆಗೂ, ನೆರೆಯ ರಾಷ್ಟ್ರ ನೇಪಾಳಕ್ಕೂ ವಿಶೇಷ ಸಂಬಂಧವಿದೆ. ನೇಪಾಳದಲ್ಲಿ ಜನಿಸಿದ ಸೀತಾಮಾತೆಯನ್ನು ಭಗವಾನ್ ಶ್ರೀರಾಮನು ವರಿಸಿದ್ದ. ಅಂದಿನಿಂದ ಭಾರತ-ನೇಪಾಳದ ಸಂಬಂಧವಿದೆ, ಇದನ್ನು ರೋಟಿ-ಭೇಟಿ ಸಂಬಂಧ ಅಂತಲೂ ಕರೆಯುತ್ತಾರೆ. ಈಗ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಗರ್ಭಗುಡಿ ಉದ್ಘಾಟನೆಯಾಗುತ್ತಿದ್ದು ಬಾಲರಾಮನ (Ram Lalla) ಅಭಿಷೇಕಕ್ಕೆ ಸೀತಾಮಾತೆಯ ತವರು ನೇಪಾಳದಿಂದ ಪವಿತ್ರ ನದಿಗಳ ನೀರನ್ನು ತರಿಸಲಾಗಿದೆ ಎಂದು ಸದಸ್ಯರೊಬ್ಬರು ಹೇಳಿದ್ದಾರೆ.
ಸಪ್ತಕೋಶಿ, ನಾರಾಯಿಣಿ, ಮಹಾಕಾಳಿ, ಕಾಳಿ ಗಂಡಕಿ, ಗಂಗಾ ಸಾಗರ್, ಬಾಗ್ಮತಿ, ಕಮಲಾ ನದಿಗಳು ಸೇರಿದಂತೆ 16 ಪವಿತ್ರ ನದಿಗಳ ನೀರನ್ನು ಶ್ರೀರಾಮನ ಅಭಿಷೇಕಕ್ಕಾಗಿ ತರಿಸಲಾಗಿದೆ. ನೇಪಾಳದಲ್ಲಿರುವ ರಾಮಭಕ್ತರ ಸಮಿತಿ ಮೂಲಕ ನೀರನ್ನು ಸಂಗ್ರಹಿಸಿ ಭಾರತಕ್ಕೆ ತರಿಸಲಾಗಿದೆ. ಈ ಜಲವನ್ನು ಅಯೋಧ್ಯಾ ಶ್ರೀರಾಮಜನ್ಮಭೂಮಿ ಟ್ರಸ್ಟ್ ಮುಖ್ಯ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ಹಸ್ತಾಂತರಿಸುತ್ತೇವೆ. ರಾಮಮಂದಿರ ಗರ್ಭಗುಡಿ ಉದ್ಘಾಟನೆಯ ದಿನ ವಿವಿಧ ಅಭಿಷೇಕಗಳು ನೇರವೇರುವ ಹೊತ್ತಿನಲ್ಲಿ, ಈ ಪವಿತ್ರ ಜಲದಿಂದ ಅಭಿಷೇಕ ನೆರವೇರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಎಲ್ಲಿಂದ ಏನೇನು ಬರುತ್ತೆ?
* ಜನವರಿ 22 ರಂದು ರಾಮಲಲ್ಲಾ ಪಟ್ಟಾಭಿಷೇಕ ನಡೆಯಲಿದೆ. ಇದಾದ ನಂತರ ದೇವರಿಗೆ ವಿಶೇಷ ನೈವೇದ್ಯ ಸಮರ್ಪಿಸಲಾಗುತ್ತದೆ. ಭಗವಾನ್ ಶ್ರೀರಾಮನ ತಾಯಿಯ (ಕೌಸಲ್ಯೆ) ಮನೆ ಛತ್ತೀಸ್ಗಢದಿಂದ 3,000 ಕ್ವಿಂಟಾಲ್ ಅಕ್ಕಿ ಬರುತ್ತಿದೆ. ಇದು ಇಲ್ಲಿಯವರೆಗಿನ ಅತಿ ಹೆಚ್ಚಿನ ಪ್ರಮಾಣದ ಅಕ್ಕಿ ರವಾನೆಯಾಗಿದ್ದು, ಇದು ಅಯೋಧ್ಯೆಗೆ ತಲುಪಲಿದೆ. ಇದನ್ನು ಛತ್ತೀಸ್ಗಢದ ವಿವಿಧ ಜಿಲ್ಲೆಗಳಿಂದ ಸಂಗ್ರಹಿಸಲಾಗಿದೆ.
* ಜನವರಿ 5 ರಂದು ಭಗವಾನ್ ರಾಮನ ಅತ್ತೆ ಮನೆಯಾದ ನೇಪಾಳದ ಜನಕ್ಪುರದಿಂದ ಬಟ್ಟೆ, ಹಣ್ಣುಗಳು ಮತ್ತು ಒಣ ಹಣ್ಣುಗಳು ಅಯೋಧ್ಯೆಗೆ ತಲುಪುತ್ತವೆ. ಇದಲ್ಲದೆ, ಉಡುಗೊರೆಗಳಿಂದ ಅಲಂಕರಿಸಲ್ಪಟ್ಟ 1,100 ಪ್ಲೇಟ್ಗಳು ಸಹ ಇರುತ್ತವೆ.
* ನೇಪಾಳದಿಂದ ಆಭರಣಗಳು, ಪಾತ್ರೆಗಳು, ಬಟ್ಟೆಗಳು ಮತ್ತು ಸಿಹಿತಿಂಡಿಗಳು ಸಹ ಬರಲಿವೆ. ಇದರಲ್ಲಿ 51 ಬಗೆಯ ಸಿಹಿತಿಂಡಿಗಳು ಇರಲಿವೆ. ಜೊತೆಗೆ ಮೊಸರು, ಬೆಣ್ಣೆ ಮತ್ತು ಬೆಳ್ಳಿಯ ಪಾತ್ರೆಗಳು ಸೇರಿವೆ.