ಬೆಂಗಳೂರು:- ಯಾವುದೇ ಕಾರಣಕ್ಕೂ ನಾನು ಬಿಜೆಪಿ ತೊರೆಯಲ್ಲ ಎಂದು ಮಾಜಿ ಸಚಿವ ಸೋಮಣ್ಣ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಪಕ್ಷದ ನಾಯಕರು ನೀಡುವ ಯಾವುದೇ ಜವಾಬ್ದಾರಿಯನ್ನು ನಿಭಾಯಿಸಲು ಸಿದ್ಧ. ‘ಆಂತರಿಕ ಹೊಂದಾಣಿಕೆ’ಯಿಂದ ನಾನು ಸಾಕಷ್ಟು ನೊಂದಿದ್ದೇನೆ.ನನ್ನ ಮೇಲೆ ಪ್ರಹಾರವಾಗಿದೆ. ಯಾರೋ ನನಗೆ ಮಾಟ ಮಾಡಿಸಿರಬಹುದೇನೋ, ನಾನೇ ಹೋಗಿ ನಾಲ್ಕೂವರೆ ಅಡಿ ಗುಂಡಿಯೊಳಗೆ ಬಿದ್ದೆ ಎಂದು ಮತ್ತೊಮ್ಮೆ ಅಸಮಾಧಾನ ಹೊರಹಾಕಿದರು. ಜನವರಿ 7 ಅಥವಾ 8 ರಂದು ದೆಹಲಿಗೆ ತೆರಳಿ ಬಿಜೆಪಿಯ ಹಿರಿಯ ನಾಯಕರ ಬಳಿ ನನ್ನ ‘ಸಂಕಟ’ಗಳನ್ನು ತಿಳಿಸುವುದಾಗಿ ಹೇಳಿದರು. ನನ್ನ ವಿಚಾರದಲ್ಲಿ ಬದಲಾವಣೆಯಾಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು.
ಪಕ್ಷದ ವರಿಷ್ಠರು ಏನೇ ನಿರ್ಧಾರ ತೆಗೆದುಕೊಂಡರೂ ನಾನು ಅದನ್ನು ಅನುಸರಿಸುತ್ತೇನೆ, ಆದರೆ ಆಂತರಿಕ ಹೊಂದಾಣಿಕೆಯಿಂದ ನಾನು ಅನುಭವಿಸಿದ ರೀತಿಯಲ್ಲಿ ಯಾರೂ ತೊಂದರೆ ಅನುಭವಿಸಬಾರದು ಎಂದರು.ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಪಕ್ಷವನ್ನು ಸರ್ವೋಚ್ಚ ಸ್ಥಾನದಲ್ಲಿ ನೋಡುತ್ತೇನೆ, ನಾಯಕರ ನಿರ್ದೇಶನಗಳಿಗೆ ಹೆಚ್ಚಿನ ಗೌರವವನ್ನು ಹೊಂದಿದ್ದೇನೆ ಎಂದು ಹೇಳಿ ಪಕ್ಷ ತೊರೆಯುವುದಿಲ್ಲ ಎಂಬ ಸಂದೇಶ ರವಾನಿಸಿದರು.