ಬಿಗ್ ಬಾಸ್ ಕನ್ನಡ ಸೀಸನ್ 10′ ಕಳೆದ ಸೀಸನ್ಗಳಿಗಿಂತ ವಿಶೇಷ ಎನಿಸಿಕೊಂಡಿದೆ. ಈ ಸೀಸನ್ ಸ್ಪರ್ಧಿಗಳು ಅಗ್ರೆಸ್ ಆಗಿ ಆಡಲು ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಅನೇಕರಿಗೆ ಇದರಿಂದ ಹಾನಿ ಉಂಟಾಗಿದೆ. ಇದರ ಜೊತೆ ಸ್ಪರ್ಧಿಗಳು ಒಂದಷ್ಟು ಮನರಂಜನೆ ಕೂಡ ನೀಡಿದ್ದಾರೆ. ಸಾಮಾನ್ಯವಾಗಿ ಬಿಗ್ ಬಾಸ್ 100 ಎಪಿಸೋಡ್ಗೆ ಪೂರ್ಣಗೊಳ್ಳುತ್ತಿತ್ತು. ಆದರೆ, ಈ ಬಾರಿ ಎರಡು ವಾರ ಹೆಚ್ಚುವರಿಯಾಗಿ ನಡೆಸಲು ವಾಹಿನಿಯವರು ನಿರ್ಧರಿಸಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 10′ ಆರಂಭ ಆಗಿದ್ದು ಅಕ್ಟೋಬರ್ 8ರಂದು. ನಟನೆ, ಹಾಸ್ಯ, ಪತ್ರಿಕೋದ್ಯಮ ಮತ್ತಿತರ ಕ್ಷೇತ್ರದಿಂದ ಸ್ಪರ್ಧಿಗಳನ್ನು ತರಲಾಯಿತು. ಆರಂಭದಲ್ಲೇ ಗುಂಪುಗಾರಿಕೆ ಆರಂಭ ಆಯಿತು. ಆದರೆ, ಇದು ಹೆಚ್ಚು ದಿನ ನಡೆಯಲಿಲ್ಲ. ವಿನಯ್ ಅವರು ಅಗ್ರೆಸ್ ಆಗಿ ಆಡಿದ್ದರಿಂದ ಸಾಕಷ್ಟು ಜನರಿಗೆ ತೊಂದರೆ ಆಯಿತು. ಇಡೀ ಮನೆ ಹೊತ್ತಿ ಉರಿಯಿತು. ಈಗ ಎಲ್ಲವೂ ಶಾಂತವಾಗುತ್ತಿದೆ. ಇದರ ಜೊತೆ ಫಿನಾಲೆ ಸಮೀಪಿಸಿದೆ.
ಲೆಕ್ಕದಂತೆ ಹೋದರೆ ಇನ್ನು ಎರಡು ವಾರಗಳಲ್ಲಿ ‘ಬಿಗ್ ಬಾಸ್’ ಫಿನಾಲೆ ಬರಬೇಕು. ಆದರೆ, ಎರಡು ವಾರ ಹೆಚ್ಚುವರಿಯಾಗಿ ನಡೆಸಲಾಗುತ್ತಿದೆ. ಈ ಮೊದಲು ಹಲವು ಸೀಸನ್ಗಳು 98ದಿನಗಳಿಗೆ ಪೂರ್ಣಗೊಂಡಿವೆ. ಟಿಆರ್ಪಿ ಉತ್ತಮವಾಗಿದ್ದಾಗ ಬಿಗ್ ಬಾಸ್ 112 ದಿನ, 117 ದಿನ ನಡೆಸಿದ್ದೂ ಇದೆ. ಈ ಬಾರಿಯೂ ಬಿಗ್ ಬಾಸ್ ಟಿಆರ್ಪಿ ಒಳ್ಳೆಯ ರೀತಿಯಲ್ಲಿ ಬರುತ್ತಿದೆ. ಹೀಗಾಗಿ, ಹೆಚ್ಚುವರಿಯಾಗಿ ಎರಡು ವಾರ ಬಿಗ್ ಬಾಸ್ ನಡೆಯಲಿದೆ. ‘ಇನ್ನೊಂದು ತಿಂಗಳಲ್ಲಿ ಬಿಗ್ ಬಾಸ್ ಫಿನಾಲೆ’ ಎಂದು ಸುದೀಪ್ ಹೇಳಿದ್ದಾರೆ. ಅಂದರೆ ಜನವರಿ 27 ಹಾಗೂ 28ರಂದು ಫಿನಾಲೆ ಎಪಿಸೋಡ್ ನಡೆಯಲಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.