ಹುಬ್ಬಳ್ಳಿ, : ಆರ್ಥಿಕ ಪ್ರಗತಿಯಲ್ಲಿ ಭಾರತ ವಿಶ್ವದ ಟಾಪ್ ಮೂರನೇ ಸ್ಥಾನಕ್ಕೆ ಬರೋದು ಸನ್ನಿಹಿತವಾಗಿದೆ ಎಂಬ ವಿಶ್ವಾಸವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಅವರು, ರಾಜ್ಯ ಹಾಗೂ ದೇಶದ ಜನರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ಹೊಸ ವರ್ಷದಲ್ಲಿ ಭಾರತ ದೇಶ ಆರ್ಥಿಕತೆಯಲ್ಲಿ ವಿಶ್ವದ ಟಾಪ್ ಮೂರನೇ ರಾಷ್ಟ್ರವಾಗಲಿದೆ.
ಈಗಾಗಲೇ ನಾವು ಟಾಪ್ ಐದನೇ ಸ್ಥಾನದಲ್ಲಿದ್ದೇವೆ. ಹೊಸ ವರ್ಷದಲ್ಲಿ ಟಾಪ್ ಮೂರನೇ ಸ್ಥಾನಕ್ಕೆ ಬರಲಿದ್ದೇವೆ. ಅದಾದ ನಂತರ ಹಂತ ಹಂತವಾಗಿ ವಿಶ್ವದಲ್ಲೇ ಭಾರತ ನಂಬರ್ ವನ್ ಸ್ಥಾನಕ್ಕೆ ಏರೋದು ಗ್ಯಾರಂಟಿ ಎಂದು ಅಭಿಪ್ರಾಯಪಟ್ಟರು. ಈ ವೇಳೆ ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಂ ಸಿಂಹ ಅವರ ಬಂಧನ ಪ್ರಕರಣದ ಬಗ್ಗೆ ಮಾದ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಲ್ಹಾದ ಜೋಶಿ,
ಪ್ರತಾಪಸಿಂಹ ಜೊತೆ ನಾನು ಈ ಬಗ್ಗೆ ಮಾತನಾಡುವೆ, ಏನು ಅಂತ ವಿಚಾರ ತಿಳಿದುಕೊಳ್ಳುವೆ. ಆದರೆ ಇಷ್ಟು ದಿನ ಬಿಟ್ಟು ಈಗ ಯಾಕೆ ಅರೆಸ್ಟ್ ಮಾಡಿದ್ದಾರೆ? ಇದರ ಹಿನ್ನಲೆ ಏನು? ಎಂಬಂತಹ ಬಹಳಷ್ಟು ಪ್ರಶ್ನೆಗಳಿವೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ನಂತರ ಪ್ರತಿಕ್ರಿಯೆ ನೀಡುವೆ ಎಂದರು.
ಮೈಸೂರು ಲೋಕಸಭಾ ಕ್ಷೇತ್ರದಿಂದ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಸ್ಪರ್ಧಿಸುವ ಸಾಧ್ಯತೆಯ ಹಿನ್ನಲೆಯಲ್ಲಿ ಹೀಗೆ ಪ್ರತಾಪ ಸಿಂಹರನ್ನ ಟಾರ್ಗೆಟ್ ಮಾಡಲಾಗಿದೆಯಾ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಪ್ರಲ್ಹಾದ ಜೋಶಿ, ” ಹಾಗೆ ಆಗಿರುವ ಸಾಧ್ಯತೆ ಇದೆ, ನಾನು ಚೆಕ್ ಮಾಡಿದ ನಂತರ ಮಾತನಾಡುವೆ” ಎಂದರು.