ಚಾಮರಾಜನಗರ: ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದ ಜಾನುವಾರುಗಳನ್ನು ಹಿಂದೂ ಸಂಘಟನೆ ಯುವಕರು ರಕ್ಷಿಸಿರುವ ಘಟನೆ ಚಾಮರಾಜನಗರದ ಸಂತೇಮರಹಳ್ಳಿ ರಸ್ತೆಯಲ್ಲಿ ನಡೆದಿದೆ. ಅಕ್ರಮವಾಗಿ ಕಸಾಯಿ ಖಾನೆಗೆ ಜಾನುವಾರುಗಳನ್ನು ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಭಜರಂಗದಳ, ಯುವ ಬ್ರಿಗೆಡ್ ನ ಕಾರ್ಯಕರ್ತರು ಸಂತೇಮರಹಳ್ಳಿ ರಸ್ತೆಯಲ್ಲಿ ವಾಹನವನ್ನು ತಡೆದು 9 ಹಸುಗಳನ್ನು ರಕ್ಷಣೆ ಮಾಡಿದ್ದಾರೆ.
ತಮಿಳುನಾಡಿನ ತಾಳವಾಡಿಯಿಂದ ಕೊಳ್ಳೇಗಾಲಕ್ಕೆ ಗೂಡ್ಸ್ ಆಟೋದಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ಈ ಸಾಗಾಟ ನಡೆಯುತ್ತಿತ್ತು ಎಂದು ತಿಳಿದುಬಂದಿದ್ದು, ಸದ್ಯ ಜಾನುವಾರುಗಳು ಮತ್ತು ಗೂಡ್ಸ್ ಆಟೋ ಚಾಲಕನನ್ನು ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.