ಹುಬ್ಬಳ್ಳಿ: ಸಾರಿಗೆ ಸಂಸ್ಥೆಯಿಂದ 2023 ನೇ ಸಾಲಿನಲ್ಲಿ ವಿತರಿಸಲಾಗಿರುವ ವಿಕಲಚೇತರ ರಿಯಾಯಿತಿ ಬಸ್ ಪಾಸ್ ಗಳ ಮಾನ್ಯತಾ ಅವಧಿಯು 31-12-2023 ರಂದು ಮುಕ್ತಾಯವಾಗಿದ್ದು, ಫಲಾನುಭವಿಗಳ ಹಿತದೃಷ್ಟಿಯಿಂದ ಸದರಿ ಪಾಸುಗಳ ಮಾನ್ಯತಾ ಅವಧಿಯನ್ನು ಫೆಬ್ರುವರಿ 29ರವರೆಗೆ ವಿಸ್ತರಿಸಲಾಗಿದೆ. ಅಷ್ಟರೊಳಗಾಗಿ ಕಳೆದ ವರ್ಷದ ಪಾಸುಗಳ ನವೀಕರಣ ಮಾಡಿಕೊಳ್ಳುವಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿ ಸರ್ಕಾರದ ನಿರ್ದೇಶನಗಳ ಪ್ರಕಾರ ಅರ್ಹ ವಿಕಲಚೇತನ ಫಲಾನುಭವಿಗಳಿಗೆ ಸಾರಿಗೆ ಸಂಸ್ಥೆಗಳಿಂದ ರಿಯಾಯಿತಿ ದರದ ಬಸ್ ಪಾಸ್ಗಳನ್ನು ವಿತರಿಸಲಾಗುತ್ತಿದೆ. ಸದರಿ ಪಾಸುಗಳ ಮಾನ್ಯತಾ ಅವಧಿಯು ಜನೆವರಿ 1ರಿಂದ ಡಿಸೆಂಬರ್ 31ರವರೆಗೆ ಇದ್ದು ಪ್ರತಿ ವರ್ಷ ನವೀಕರಣ ಮಾಡಿಕೊಳ್ಳಬೇಕಾಗಿರುತ್ತದೆ. ಅದರಂತೆ 2023 ನೇ ಸಾಲಿನಲ್ಲಿ ವಿತರಿಸಿದ ಪಾಸುಗಳ ಮಾನ್ಯತಾ ಅವಧಿಯು ಡಿಸೆಂಬರ್ 31ಕ್ಕೆ ಮುಕ್ತಾಯವಾಗಿದ್ದು,
2024ನೇ ಸಾಲಿಗೆ ನವೀಕರಣ ಮಾಡಿಕೊಳ್ಳಬೇಕಾಗಿರುತ್ತದೆ. ನವೀಕರಣಕ್ಕಾಗಿ ಅರ್ಹ ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು. ಪಾಸ್ ಗಾಗಿ ವಾರ್ಷಿಕ ಶುಲ್ಕ ರೂ. 660ಗಳನ್ನು ನಿಗದಿಪಡಿಸಲಾಗಿದ್ದು, ಡಿ.ಡಿ. ಮೂಲಕ ಅಥವಾ ನಗದಾಗಿ ಪಾವತಿಸಬಹುದಾಗಿದೆ. ಸೇವಾ ಸಿಂಧು ಪೋರ್ಟಲ್ಲಿ ಅರ್ಜಿ ಸಲ್ಲಿಸಿ ಪಾಸುಗಳನ್ನು ನವೀಕರಿಸಿಕೊಳ್ಳಲು ಫಲಾನುಭವಿಗಳಿಗೆ,
ಅನುಕೂಲವಾಗುವಂತೆ ಸಾಕಷ್ಟು ಕಾಲಾವಕಾಶ ನೀಡುವ ದೃಷ್ಟಿಯಿಂದ 2023 ನೇ ಸಾಲಿನಲ್ಲಿ ವಿತರಿಸಲಾಗಿರುವ ರಿಯಾಯಿತಿ ಪಾಸುಗಳ ಮಾನ್ಯತಾ ಅವಧಿಯನ್ನು ಫೆಬ್ರುವರಿ 29 ರವರೆಗೆ ವಿಸ್ತರಿಸಲಾಗಿದೆ. ನಂತರದಲ್ಲಿ ಪಾಸ ಬಯಸುವ ಫಲಾನುಭವಿಗಳು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿ ಹೊಸದಾಗಿ ರಿಯಾಯಿತಿ ಪಾಸ್ ಗಳನ್ನು ಪಡೆಯಬೇಕಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.