ರಾಯಚೂರು:-ಸಿಂಧನೂರ ತಾಲೂಕಿನಲ್ಲಿ ಈಗಾಗಲೆ ಶೇ.80ರಷ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಕ್ಕಿದೆ. ಇನ್ನುಳಿದ ಪ್ರದೇಶವನ್ನು ಸಹ ನೀರಾವರಿ ವ್ಯಾಪ್ತಿಗೊಳಪಡಿಸಲು ಒತ್ತು ಕೊಡಲಾಗುವುದು ಎಂದು ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ಹೇಳಿದರು. ಪಟ್ಟಣದ ಕುಷ್ಟಗಿ ರಸ್ತೆಯಲ್ಲಿನ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆದ ಮಹತ್ವದ ತಿಮ್ಮಾಪುರ ಏತ ನೀರಾವರಿ ಯೋಜನೆಯ ಲೋಕಾರ್ಪಣೆ,
ಜಲಜೀವನ ಮಿಷನ್ ಯೋಜನೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಸರ್ಕಾರಿ ಪದವಿ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಮತ್ತು ಕರ್ನಾಟಕ ಸಂಭ್ರಮ-50ರ ರಥಯಾತ್ರೆಗೆ ಚಾಲನೆ ಮತ್ತು ಸಿಂಧನೂರ ವಿಧಾನಸಭಾ ಮತಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭಕ್ಕೆ ಸಂವಿಧಾನ ಪೀಠಿಕೆ ಓದುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ 27,000 ಎಕರೆ ಪ್ರದೇಶಕ್ಕೆ ನೀರು ಸಿಗುತ್ತಿರಲಿಲ್ಲ. ಈ ಭಾಗದ ಜನರು ಶಾಸಕರಾದ ಹಂಪನಗೌಡ ಬಾದರ್ಲಿ ಅವರ ಮೇಲೆ ಒತ್ತಡ ಹಾಕಿ ತಮಗೆ ನೀರು ಕೊಡಿ ಎಂದು ಬೇಡಿಕಿ ಇಟ್ಟಿದ್ದರು. ಹಿಂದಿನ ಸಮ್ಮಿಶ್ರ ಸರ್ಕಾರದ ವೇಳೆಯಲ್ಲಿ ಡಿ.ಕೆ.ಶಿವಕುಮಾರ ಅವರು ನೀರಾವರಿ ಮಂತ್ರಿಗಳಾಗಿದ್ದಾಗ ಈ ಏತ ನೀರಾವರಿ ಯೋಜನೆಗೆ ಅನುದಾನ ನೀಡಲು ಶ್ರಮಿಸಿದ್ದರು. ಅಂದಾಜು 90.60 ಕೋಟಿ ರೂ.ವೆಚ್ಚದ ಈ ಯೋಜನೆಯಡಿ ತುಂಗಭದ್ರಾ ಜಲಾಶಯದಿಂದ ನೀರನ್ನು ಎತ್ತಿ ಸಿಂಧನೂರ ಭಾಗದ ಪ್ರದೇಶಕ್ಕೆ ನೀರು ಹರಿಸಲಾಗುತ್ತದೆ.
ಅಂದಾಜು 1.85 ಟಿಎಂಸಿ ನೀರಿನಿಂದಾಗಿ ಈ ಭಾಗದ ಸಾವಿರಾರು ಎಕರೆ ಪ್ರದೇಶಕ್ಕೆ ನೀರು ಸಿಗುತ್ತಿದೆ. ಈ ನೀರಾವರಿ ವ್ಯಾಪ್ತಿಯ ಪ್ರದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಮತ್ತು ಹಿಂದುಳಿದ ವರ್ಗದ ಜನರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಜನರು ಸಹ ನೀರಾವರಿ ಸೌಲಭ್ಯ ಅನುಭವಿಸಬೇಕು. ಈ ಜನರು ಸಹ ಭತ್ತ ಬೆಳೆಯಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ರೈತರ ಜೀವನವನ್ನು ಸುಧಾರಿಸಬೇಕು ಎಂಬುದು ನಮ್ಮ ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಇಂತಹ ಕಾರಣದಿಂದಾಗಿ ತಿಮ್ಮಾಪುರ ಏತ ನೀರಾವರಿ ಯೋಜನೆ ಅನುಷ್ಠಾನ ಸಾಧ್ಯವಾಗಿದೆ ಎಂದು ತಿಳಿಸಿದರು.
180 ಟಿಎಂಸಿ ಸಾಮರ್ಥ್ಯದ ತುಂಗಭದ್ರಾ ಜಲಾಶಯದಲ್ಲಿ ಅಗತ್ಯ ಪ್ರಮಾಣದಲ್ಲಿ ನೀರು ಶೇಖರಣೆ ಯಾಗುತ್ತಿಲ್ಲ. ಜಲಾಶಯದಿಂದ ಪೋಲಾಗುವ 32 ಟಿಎಂಸಿ ನೀರನ್ನು ಉಳಿಸಿಕೊಳ್ಳಲು ನವಲಿ ಸಮತೋಲನ ಜಲಾಶಯ ನಿರ್ಮಾಣ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು. ಕರ್ನಾಟಕ ಎಂದು ನಾಮಕರಣವಾಗಿ 2023ಕ್ಕೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಇಡೀ ವರ್ಷ 2024ರ ನವೆಂಬರ್ವರೆಗೆ ರಾಜ್ಯ ಸರ್ಕಾರದಿಂದ ಸುವರ್ಣ ಸಂಭ್ರಮ ಕಾರ್ಯಕ್ರಮ ಮಾಡುತ್ತಿದ್ದೇವೆ. ಕರ್ನಾಟಕ ಹೆಸರಾಯಿತು ಕನ್ನಡ ಉಸಿರಾಯಿತು ಎನ್ನುವ ಘೋಷ ವಾಕ್ಯದಡಿ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ರಾಜ್ಯ ಸರ್ಕಾರವು ಅಸ್ತಿತ್ವಕ್ಕೆ ಬಂದು 7 ತಿಂಗಳೊಳಗೆ 4 ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ. ನಾವು ನುಡಿದಂತೆ ನಡೆಯುತ್ತಿದ್ದು ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಯ ಐದನೇಯ ಯುವನಿಧಿ ಯೋಜನೆಗೂ ಚಾಲನೆ ನೀಡಿದ್ದೇವೆ. ಐದು ಗ್ಯಾರಂಟಿ ಯೋಜನೆಗಳ ಜಾರಿಯಿಂದಾಗಿ ರಾಜ್ಯದ ಜನರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಗ್ಯಾರಂಟಿ ಯೋಜನೆ ಜಾರಿ ಮಾಡದಿದ್ದರೆ ಜನರು ಭುಗಿಲೇಳುತ್ತಿದ್ದರು ಎಂದರು. ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದರು ಸಹ ರಾಜ್ಯ ಸರ್ಕಾರವು ಆರ್ಥಿಕವಾಗಿ ಸುಭದ್ರವಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಸಜ್ಜನ ರಾಜಕಾರಣಿ: ಶಾಸಕರಾದ ಹಂಪನಗೌಡ ಬಾದರ್ಲಿ ಅವರು ಸಜ್ಜನ ರಾಜಕಾರಣಿಯಾಗಿದ್ದಾರೆ. ಅಭಿವೃದ್ಧಿಪರವಾಗಿ ಸದಾಕಾಲ ಆಲೋಚಿಸುವಂತಹ ನಾಯಕರಾಗಿದ್ದಾರೆ. ಈ ರೀತಿ ಪ್ರತಿಯೊಬ್ಬ ಶಾಸಕರು ಆಲೋಚನೆ ಮಾಡುವಂತಾಗಬೇಕು ಎಂಬುದು ತಮ್ಮ ಕಳಕಳಿಯಾಗಿದೆ ಎಂದರು. ಕಾರ್ಯಕ್ರಮದ ಕೊನೆಯಲ್ಲಿ, ಶಾಸಕರಾದ ಹಂಪನಗೌಡ ಬಾದರ್ಲಿ ಅವರ ಅಭಿಮಾನಿಗಳು ಶಾಸಕರಾದ ಬಾದರ್ಲಿ ಅವರಿಗೆ ಸಚಿವ ಸ್ಥಾನದ ಬೇಡಿಕೆ ಇಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಅಭಿಮಾನಿಗಳ ಬೇಡಿಕೆಯ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.