ವಿಜಯಪುರ:– ಬರುವ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಕ್ಷೇತ್ರಗಳಲ್ಲೂ ಬಿಜೆಪಿಯ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಜನತೆ ನಿಮ್ಮ ಮುಖಕ್ಕೆ ಮಂಗಳಾರತಿ ಎತ್ತುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ಈ ಕುರಿತು ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ.
ಸರಕಾರಿ ನೌಕರರಿಗೆ ವೇತನ ಕೊಡಲಾಗದ ದಾರುಣ ಪರಿಸ್ಥಿತಿ ಈಗಾಗಲೇ ಬಂದಿದೆ. 14 ಬಜೆಟ್ ಮಂಡಿಸಿದ ಮುಖ್ಯಮಂತ್ರಿಗಳು ಈಗ ವಿಲವಿಲ ಒದ್ದಾಡುತ್ತಿದ್ದಾರೆ. ಚುನಾವಣೆ ಗೆಲ್ಲಲೇಬೇಕೆಂಬ ಹಪಾಹಪಿಯಲ್ಲಿ ಭರವಸೆ ನೀಡಿದ್ದ ಅವರು, ಜಾಹೀರಾತಿನೊಂದಿಗೆ ಕಾಲಹರಣ ಮಾಡುತ್ತಿದ್ದಾರೆ. ಯಾವ ಶಾಸಕರಿಗೂ ಒಂದು ರೂಪಾಯಿ ಅನುದಾನ ಕೊಟ್ಟಿಲ್ಲ ಎಂದು ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು. ಕಾಂಗ್ರೆಸ್ಸಿನ ತುಷ್ಟೀಕರಣ ನೀತಿಯಿಂದ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಸಮಸ್ಯೆ ಆಗಲಿದೆ. ನಿಮ್ಮ ನಡವಳಿಕೆಯನ್ನು ರಾಜ್ಯದ ಮತದಾರರು ಗಮನಿಸುತ್ತಿದ್ದಾರೆ. ಇದಕ್ಕೆ ತಕ್ಕ ಉತ್ತರವನ್ನು ನೀಡುತ್ತಾರೆ. ಕಾಂಗ್ರೆಸ್ ಪರಿಸ್ಥಿತಿಯನ್ನು ಲೋಕಸಭಾ ಚುನಾವಣೆ ಬಳಿಕ ನೋಡಿ ಎಂದು ಹೇಳಿದರು. ಉಸ್ತುವಾರಿ ಸಚಿವರು ಜಿಲ್ಲೆಗಳಲ್ಲಿ ಸಭೆ ಮಾಡಿಲ್ಲ. ಕಂದಾಯ ಸಚಿವರು ಬೆಂಗಳೂರಿನಲ್ಲಿ ಎ.ಸಿ.ರೂಮಿನಲ್ಲಿ ಸಭೆ ಮಾಡಿದ್ದಾರೆ. ಕಾಟಾಚಾರಕ್ಕೆ ಅಲ್ಲಿ ಇಲ್ಲಿ ಭೇಟಿ ಕೊಟ್ಟಿದ್ದಾರೆ. ರೈತರಿಗೆ ಪರಿಹಾರ ಕೊಡದ ಸರಕಾರದ ಮುಖ್ಯಮಂತ್ರಿಗಳು ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಕೊಡುವುದಾಗಿ ಹೇಳಿದ್ದಾರೆ ಎಂದು ಟೀಕಿಸಿದರು.