ಹುಬ್ಬಳ್ಳಿ: ಇಲ್ಲಿಯ ಕೊಯಿನ್ ರಸ್ತೆಯ ಮಲಬಾರ್ ಗೋಲ್ಡ್ ಅಂಗಡಿಯಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ಕಳ್ಳತನ ಮಾಡಿದ್ದ ಅಂತಾರಾಜ್ಯ ಕಳ್ಳನನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದು, ಬಂಧಿತನಿಂದ 1 ಲಕ್ಷ ರೂ. ಮೌಲ್ಯದ 14.21 ಗ್ರಾಂ ತೂಕದ ಬಂಗಾರದ ಉಂಗುರ ಜಪ್ತಿ ಮಾಡಿದ್ದಾರೆ.
ಬೆಂಗಳೂರು ಮೂಲದ ಖಾದರ್ ತನ್ವೀರ್ ಪಾಷಾ (60) ಬಂಧಿತ. ಗ್ರಾಹಕರ ಸೋಗಿನಲ್ಲಿ ಬಂದು ಅಂಗಡಿಯ ಸೇಲ್ಸ್ಸ್ಮನ್ನ ಗಮನ ಬೇರೆ ಕಡೆ ಸೆಳೆದು 1 ಲಕ್ಷ ರೂ ಮೌಲ್ಯದ 14.21 ಗ್ರಾಂ ತೂಕದ ಬಂಗಾರದುಂಗುರ ಕಳ್ಳತನ ಮಾಡಿ, ಅದೇ ಸ್ಥಳದಲ್ಲಿ ತಾನು ತೆಗೆದುಕೊಂಡು ಬಂದಿದ್ದ ಹಿತ್ತಾಳೆ ಉಂಗುರವಿಟ್ಟು ಎಸ್ಕೇಪ್ ಆಗಿದ್ದ.
ಪ್ರಕರಣ ದಾಖಲಿಸಿಕೊಂಡಿದ್ದ ಶಹರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಎಂ.ಎಂ. ತಹಸೀಲ್ದಾರ್ ನೇತೃತ್ವದ ವಿಶೇಷ ತಂಡ, ಆರೋಪಿಯ ಜಾಡು ಹಿಡಿದು ರಾಜ್ಯದ ರಾಜಧಾನಿಗೆ ತೆರಳಿತ್ತು. ಬೆಂಗಳೂರಿನ ಆನಂದ ನಗರದಲ್ಲಿ ಆರೋಪಿ ಇರುವಿಕೆ ಪತ್ತೆ ಹಚ್ಚಿದ ತಂಡ, ಖಡ್ಡಾಕ್ಕೆ ಕೆಡವಿತ್ತು. ಬಂಧಿತನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.