ಸೆಂಚೂರಿಯನ್: ಟೀಂ ಇಂಡಿಯಾ (Team India) ಟಾಪ್ ಕ್ಲಾಸ್ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಅತ್ಯುತ್ತಮ ಬ್ಯಾಟಿಂಗ್ ಫಾರ್ಮ್ನೊಂದಿಗೆ ದಾಖಲೆ ಮೇಲೆ ದಾಖಲೆಗಳನ್ನ ಬರೆಯುತ್ತಿದ್ದಾರೆ. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಒಟ್ಟು 114 ರನ್ ಕಲೆಹಾಕುವ ಮೂಲಕ ಪ್ರಸಕ್ತ ವರ್ಷದ ಎಲ್ಲಾ ಸ್ವರೂಪದಲ್ಲೂ 2 ಸಾವಿರ ರನ್ ಪೂರ್ಣಗೊಳಿಸಿದ ಸಾಧನೆ ಮಾಡಿದ್ದಾರೆ.
ಭಾರತದ ಆತಿಥ್ಯದಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕೊಹ್ಲಿ 50ನೇ ಶತಕ ಸಿಡಿಸುವ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ದಾಖಲೆಯನ್ನ ನುಚ್ಚುನೂರು ಮಾಡಿದ್ದರು. ಇದೀಗ ದಕ್ಷಿಣ ಆಫ್ರಿಕಾ (South Africa) ವಿರುದ್ಧ ಅರ್ಧಶತಕ ಸಿಡಿಸುವ ಮೂಲಕ 146 ವರ್ಷಗಳ ಟೆಸ್ಟ್ ಕ್ರಿಕೆಟ್ (Test Cricket) ಇತಿಹಾಸದಲ್ಲೇ ಮಹತ್ವದ ಮೈಲುಗಲ್ಲು ತಲುಪಿದ್ದಾರೆ.
ಕೊಹ್ಲಿ ಸಪ್ತ ಸಾಧನೆ:
ವಿರಾಟ್ ಕೊಹ್ಲಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನ ಆರಂಭಿಸಿದಾಗಿನಿಂದಲೂ ಉತ್ತಮ ಫಾರ್ಮ್ನಲ್ಲಿದ್ದು, ಒಂದೇ ಕ್ಯಾಲೆಂಡರ್ ವರ್ಷದಲ್ಲಿ 7 ಬಾರಿ 2000 ರನ್ ಗಳಿಸಿದ ಮೊದಲ ಆಟಗಾರ ಎಂಬ ಖ್ಯಾತಿಯನ್ನೂ ಗಳಿಸಿದ್ದಾರೆ. 2012 (2,186 ರನ್), 2014 (2,286 ರನ್), 2016 (2,595 ರನ್), 2017 (2,818 ರನ್), 2018 (3,735 ರನ್) ಹಾಗೂ 2019ರಲ್ಲಿ (2,455 ರನ್) ಈ ಸಾಧನೆ ವಿರಾಟ್ ಮಾಡಿದ್ದಾರೆ.
ಆದ್ರೆ, 2000 ರಿಂದ 2022ರ ವರೆಗೆ ತಮ್ಮ ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡಿದ್ದರಿಂದ ಕೊಹ್ಲಿ ಪ್ರಮುಖ ಸಾಧನೆಗಳನ್ನು ಮಾಡುವಲ್ಲಿ ಎಡವಿದ್ದರು. ಆದ್ರೆ 2022ರ ಟಿ20 ಏಷ್ಯಾಕಪ್ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದ ಕೊಹ್ಲಿ 2023ರಲ್ಲಿ ಮಹತ್ವದ ಮೈಲುಗಲ್ಲುಗಳನ್ನ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. 1877ರಲ್ಲಿ ಕ್ರಿಕೆಟ್ ಆರಂಭವಾದಾಗಿನಿಂದಲೂ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಖ್ಯಾತಿಗೂ ಕಾರಣರಾಗಿದ್ದಾರೆ.
ಎಬಿಡಿ ದಾಖಲೆಯೂ ಉಡೀಸ್:
ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚೂರಿಯನ್ನಲ್ಲಿ ನಡೆದ ಪಂದ್ಯದಲ್ಲಿ 76 ರನ್ ಗಳಿಸಿ ಟೆಸ್ಟ್ ಸ್ವರೂಪದಲ್ಲಿ 8,790 ರನ್ ಕಲೆ ಹಾಕಿದ ವಿರಾಟ್ ಕೊಹ್ಲಿ, 21ನೇ ಶತಮಾನದ ಬ್ಯಾಟರ್ಗಳ ಸಾಲಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಅಗ್ರ ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ. ಆ ಮೂಲಕ ಎಬಿ ಡಿ ವಿಲಿಯರ್ಸ್ (8,765 ರನ್, 22 ಶತಕ, 46 ಅರ್ಧಶತಕ) ಅವರ ದಾಖಲೆಯನ್ನು ಮುರಿದಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯರು
* 15,921 ರನ್- ಸಚಿನ್ ತೆಂಡೂಲ್ಕರ್- 329 ಇನಿಂಗ್ಸ್
* 13,265 ರನ್- ರಾಹುಲ್ ದ್ರಾವಿಡ್- 284 ಇನಿಂಗ್ಸ್
* 10,122 ರನ್- ಸುನೀಲ್ ಗವಾಸ್ಕರ್- 214 ಇನಿಂಗ್ಸ್
* 8,790 ರನ್- ವಿರಾಟ್ ಕೊಹ್ಲಿ- 189 ಇನಿಂಗ್ಸ್
* 8,781 ರನ್- ವಿವಿಎಸ್ ಲಕ್ಷ್ಮಣ್- 189 ಇನಿಂಗ್ಸ್