ಕಡಲೆಹಿಟ್ಟು ಅಡುಗೆಗೆ ಮಾತ್ರವಲ್ಲದೆ, ಸೌಂದರ್ಯ ವೃದ್ಧಿಸಲೂ ಕೂಡಾ ಉಪಯೋಗಿಸಲಾಗುತ್ತದೆ. ಹಿಂದಿನ ಕಾಲದಿಂದಲೂ ಕಡಲೆಹಿಟ್ಟನ್ನು ಸೌಂದರ್ಯ ವರ್ಧಕವಾಗಿ ಬಳಸಲಾಗುತ್ತಿತ್ತು.
ಸೋಪ್ ಕಂಡುಹಿಡಿಯುವ ಮೊದಲು ಕಡಲೆಹಿಟ್ಟನ್ನು ಸೋಪ್ ನಂತೆ ಉಪಯೋಗಿಸುತ್ತಿದ್ದರು. ಕಡಲೆ ಹಿಟ್ಟಿನಲ್ಲಿರುವ ಕೆಲವೊಂದು ಗುಣಗಳಿಂದಾಗಿ ಇಂದಿನ ದಿನಗಳಲ್ಲೂ ಕಡಲೆಹಿಟ್ಟಿನಿಂದ ತಯಾರಿಸಿದ ಸೋಪ್ ಗಳು ಮಾರುಕಟ್ಟೆಯಲ್ಲಿವೆ.
ಚರ್ಮದಲ್ಲಿ ಉಂಟಾಗುವ ಅಲರ್ಜಿ, ತುರಿಕೆ, ಉರಿಗಳಿಂದ ದೂರವಿಡಲು ಕಡಲೆ ಹಿಟ್ಟು ಉತ್ತಮ ಪರಿಹಾರ. ಕಡಲೆ ಹಿಟ್ಟನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮದ ಕಾಂತಿ ಹೆಚ್ಚಿಸುತ್ತದೆ. ಚರ್ಮ ಸುಕ್ಕುಗಟ್ಟದಂತೆ ತಡೆದು, ಯಾವುದೇ ರೀತಿಯ ಚರ್ಮದ ಕಾಯಿಲೆ ಬರದಂತೆ ತಡೆಯುತ್ತದೆ.
ಸೌಂದರ್ಯದ ದೃಷ್ಟಿಯಿಂದ ನೋಡಿದಾಗಲೂ ಕಡಲೆ ಹಿಟ್ಟು ಹಲವು ವಿಧದಲ್ಲಿ ತ್ವಚೆಗೆ ಉಪಯೋಗಕಾರಿಯಾಗಿದೆ. ಸತತವಾಗಿ ಕಡ್ಲೆ ಹಿಟ್ಟಿನಿಂದ ಮುಖ ತೊಳೆಯುವುದರಿಂದ ಚರ್ಮ ನಯವಾಗಿ ಕಾಣಿಸುತ್ತದೆ. ಕಡಲೆ ಹಿಟ್ಟಿನಿಂದ ಮುಖದ ಕಲೆ ದೂರವಾಗುತ್ತದೆ. ಬಿಸಿಲಿನಿಂದ ತ್ವಚೆ ಕಪ್ಪಗಾಗಿದ್ದರೆ ಅದನ್ನು ಹೋಗಲಾಡಿಸುತ್ತದೆ. ಯಾವುದೇ ಅಡ್ಡಪರಿಣಾಮವಿಲ್ಲದೇ ಕಡಲೆ ಹಿಟ್ಟು ಉಪಯೋಗಿಸಿ ಸೌಂದರ್ಯ ವೃದ್ಧಿಸಿಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳೋಣ.
ಹೊಳಪಿನ ತ್ವಚೆಗೆ
ಮೊದಲು ಕಡಲೆಹಿಟ್ಟಿಗೆ ಸ್ವಲ್ಪ ಹಾಲು ಬೆರೆಸಿ, ಕೇಸರಿ ಹಾಕಿ ಐದು ನಿಮಿಷ ನೆನೆಯಲು ಬಿಡಿ. ಬಳಿಕ ಪೇಸ್ಟ್ ರೀತಿಯಾಗಿ ಮುಖಕ್ಕೆ ಹಚ್ಚಿಕೊಂಡು 30 ನಿಮಿಷಗಳ ಬಳಿಕ ಮುಖ ತೊಳೆಯಬೇಕು. ಹೀಗೆ ಮಾಡುವುದರಿಂದ ತ್ವಚೆ ಹೊಳಪು ಪಡೆದುಕೊಳ್ಳುವುದನ್ನು ಗಮನಿಸಬಹದು.
ಮುಖದಲ್ಲಿನ ಕಲೆ ಹೋಗಲಾಡಿಸಲು:
ಮುಖಕ್ಕೆ ಸೋಪ್ ಅಥವಾ ವಿವಿಧ ಫೇಸ್ ವಾಶ್ ಬಳಸುವ ಬದಲು ದಿನನಿತ್ಯ ಕಡ್ಲೆ ಹಿಟ್ಟು ಹಚ್ಚಿ 15 ನಿಮಿಷ ಬಿಟ್ಟು ಮುಖ ತೊಳೆದರೆ ಕಲೆಗಳು ಕಡಿಮೆಯಾಗುತ್ತಾ ಬರುತ್ತದೆ.
ಟೊಮೆಟೊ ರಸ ತೆಗೆದುಕೊಂಡು ಅದಕ್ಕೆ 2-3 ಚಮಚ ಕಡಲೆಹಿಟ್ಟನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಈ ಮಿಶ್ರಣವನ್ನು ಸ್ವಚ್ಛಗೊಳಿಸಿದ ಮುಖ ಹಾಗೂ ಕುತ್ತಿಗೆಗೆ ಹಚ್ಚಿ 15-20 ನಿಮಿಷ ಬಿಟ್ಟು ತೊಳೆಯಿರಿ.
ಎಣ್ಣೆ ತ್ವಚೆ ಹೋಗಲಾಡಿಸಲು:
ಮೊಸರು ಮತ್ತು ಕಡ್ಲೆ ಹಿಟ್ಟಿನ ಫೇಸ್ ಪ್ಯಾಕ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ತೊಳೆದರೆ, ಮುಖದ ಎಣ್ಣೆ ಅಂಶ ಕಡಿಮೆಯಾಗುತ್ತದೆ.
ಮೊಡವೆ ಸಮಸ್ಯೆ ನಿವಾರಣೆಗೆ:
ಮೊಡವೆ ಸಮಸ್ಯೆ ನಿವಾರಿಸಲು ಕಡ್ಲೆಹಿಟ್ಟಿನ ಜೊತೆ ಸ್ವಲ್ಪ ಹಾಲು, ಅರಿಶಿನ ಬೆರೆಸಿ ಮುಖಕ್ಕೆ ಹಚ್ಚಿ. 15-30 ನಿಮಿಷಗಳ ಬಳಿಕ ಮುಖ ತೊಳೆದು ಸ್ವಚ್ಛಗೊಳಿಸಿ. ವ್ಯತ್ಯಾಸ ಗಮನಿಸಿ.
ಒಂದು ಚಮಚ ಕಡಲೆಹಿಟ್ಟಿಗೆ ಗಂಧದ ಹುಡಿ ಮತ್ತು ಹಾಲನ್ನು ಬೆರೆಸಿ ಇದಕ್ಕೆ ನೀರು ಸೇರಿಸಿ ಪೇಸ್ಟ್ ಮಾಡಿಕೊಳ್ಳಬೇಕು. ಇದನ್ನು ನಿಯಮಿತವಾಗಿ ಮುಖಕ್ಕೆ ಹಚ್ಚಿಕೊಳ್ಳಬೇಕು. (ಸ್ವಲ್ಪ ಅರಿಶಿನವನ್ನು ಇದಕ್ಕೆ ಸೇರಿಸಿಕೊಳ್ಳಬಹುದು.)
ಟೊಮೇಟೊ ಹಣ್ಣಿನ ರಸವನ್ನು ಕಡಲೆಹಿಟ್ಟಿನೊಂದಿಗೆ ಬೆರೆಸಿಕೊಂಡು ಇದಕ್ಕೆ ಎರಡು ಚಮಚ ಅಲೊವೇರಾ ಜೆಲ್ ಸೇರಿಸಿಕೊಳ್ಳಬೇಕು. ನಂತರ ಮುಖಕ್ಕೆ ಹಚ್ಚಿ 20 ನಿಮಿಷ ಹಾಗೆಯೇ ಬಿಟ್ಟು ಮುಖ ತೊಳೆಯಬೇಕು.
ತ್ವಚೆಯ ಕಪ್ಪು ಕಲೆ ನಿವಾರಣೆಗೆ:
ಕೈ, ಕುತ್ತಿಗೆ ಕಪ್ಪಾಗಿದ್ದರೆ ಕಡ್ಲೆ ಹಿಟ್ಟಿಗೆ ಮೊಸರು ಮತ್ತು ನಿಂಬೆ ರಸ (ಬೇಕಾದಲ್ಲಿ ಈ ಮಿಶ್ರಣಕ್ಕೆ ಅರಶಿನ ಸ್ವಲ್ಪ ಸೇರಿಸಬಹುದು) ಬೆರೆಸಿ ಹಚ್ಚಬೇಕು. ಕಪ್ಪು ಕಲೆ ನಿವಾರಣೆಯಾಗುವುದರೊಂದಿಗೆ ಮುಖದ ಡೆಡ್ ಸ್ಕಿನ್ ದೂರ ಮಾಡಲು ಸಹಾಯ ಮಾಡುತ್ತದೆ.