ಲಕ್ನೋ: ಅಯೋಧ್ಯೆಯಲ್ಲಿ ರಾಮಮಂದಿರ (Ram Mandir) ವಿಗ್ರಹ ಪ್ರತಿಷ್ಠಾಪನೆಗೆ ಇನ್ನೇನು ಕೆಲವೇ ದಿನಗಳಿರುವ ಹೊತ್ತಿನಲ್ಲಿ ಉತ್ತರಪ್ರದೇಶದ (Uttar Pradesh) ಸ್ವರೂಪ ಸಂಪೂರ್ಣ ಬದಲಾಗುತ್ತಿದೆ. ರಾಜ್ಯದ ಪ್ರಮುಖ ಸ್ಥಳಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಇದೀಗ ಅಯೋಧ್ಯೆಯ ರೈಲ್ವೇ ನಿಲ್ದಾಣಕ್ಕೆ `ಅಯೋಧ್ಯಾ ಧಾಮ್’ ಜಂಕ್ಷನ್ (Ayodhya Dham) ಎಂದು ಮರುನಾಮಕರಣ ಮಾಡಲಾಗಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಂಸದ ಲುಲ್ಲು ಸಿಂಗ್, ಇಂದು ಪ್ರಧಾನಿ ನರೇಂದ್ರ ಮೋದಿಯವರು (Narendra Modi) `ಅಯೋಧ್ಯಾ ಧಾಮ್’ ರೈಲ್ವೇ ನಿಲ್ದಾಣ ಉದ್ಘಾಟಿಸಲಿದ್ದಾರೆ. ರೈಲ್ವೇ ನಿಲ್ದಾಣದ ಎಸ್ಕಲೇಟರ್ಗಳು ಮತ್ತು ಗೋಡೆಗಳ ಮೇಲೆ ಭಗವಾನ್ ರಾಮನ ಭಿತ್ತಿಚಿತ್ರಗಳನ್ನು ಚಿತ್ರಿಸಲಾಗಿದೆ. ರೈಲು ನಿಲ್ದಾಣದಲ್ಲಿ ಲಿಫ್ಟ್ಗಳು, ಪ್ರವಾಸಿ ಮಾಹಿತಿ ಕೇಂದ್ರ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚುವರಿಯಾಗಿ ಕಲ್ಪಿಸಲಾಗಿದೆ. ಜನರ ನಿರೀಕ್ಷೆಯಂತೆ ಈ ಹೆಸರನ್ನು ಬದಲಿಸಲಾಗಿದೆ ಎಂದು ತಿಳಿಸಿದ್ದಾರೆ.
ನಿಲ್ದಾಣದ ಮುಖ್ಯ ಕಟ್ಟಡವು ರಾಮ ಮಂದಿರವನ್ನು ಹೋಲುತ್ತದೆ. ಕಟ್ಟಡದ ನಿರ್ಮಾಣಕ್ಕೆ ರಾಮ ಮಂದಿರದ ನಿರ್ಮಾಣದಲ್ಲಿ ಬಳಸಿದ ರಾಜಸ್ಥಾನದಿಂದ ತಂದ ಗುಲಾಬಿ ಬನ್ಸಿ ಪಹರ್ಪುರ್ ಕಲ್ಲುಗಳನ್ನು ಬಳಸಲಾಗಿದೆ. 10,000 ಚದರ ಮೀಟರ್ಗಳಷ್ಟು ವ್ಯಾಪಿಸಿರುವ ಈ ನಿಲ್ದಾಣವು ಮೂರು ಪ್ಲಾಟ್ ಫಾರ್ಮ್ ಗಳನ್ನು ಒಳಗೊಂಡಿದೆ. 240 ಕೋಟಿ ರೂ. ಬಜೆಟ್ನಲ್ಲಿ ಈ ರೈಲ್ವೇ ನಿಲ್ದಾಣ ಪೂರ್ಣಗೊಂಡಿದೆ. ಕೇಂದ್ರ ಸರ್ಕಾರದ ಒಂದು ಅಂಗವಾದ ರೈಲ್ ಇಂಡಿಯಾ ಟೆಕ್ನಿಕಲ್ ಅಂಡ್ ಎಕನಾಮಿಕ್ಸ್ ಸರ್ವಿಸ್ ಇದರ ಮೇಲ್ವಿಚಾರಣೆಯನ್ನು ವಹಿಸಿಕೊಂಡಿದೆ. ಮುಂಬರುವ ಎರಡನೇ ಹಂತದ ನಿರ್ಮಾಣ ಕಾಮಗಾರಿಗೆ 480 ಕೋಟಿ ರೂ. ಬಜೆಟ್ ಮೀಸಲಿಡಲಾಗಿದೆ.