ಹುಬ್ಬಳ್ಳಿ: ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿಯಲ್ಲಿಯೂ ಕನ್ನಡ ನಾಮಫಲಕದ ಹೋರಾಟದ ಕಿಚ್ಚು ಹತ್ತಿದೆ. ಈಗಾಗಲೇ ರಾಜ್ಯಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿರುವ ಹೋರಾಟ ಈಗ ವಾಣಿಜ್ಯನಗರಿಯಲ್ಲಿಯೂ ಮುನ್ನೆಲೆಗೆ ಬಂದಿದೆ. ಬಾರಕೋಲು ಮೂಲಕ ಎಚ್ಚರಿಕೆ ಘಂಟೆ ಬಾರಿಸಿದ್ದಾರೆ. ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಆಟೋ ಚಾಲಕರ ಸಂಘ ಸೇರಿದಂತೆ ಬಹುತೇಕ ಕನ್ನಡಪರ ಹೋರಾಟಗಾರರು ರಸ್ತೆಗೆ ಇಳಿದು ಹೋರಾಟಕ್ಕೆ ಮುಂದಾಗಿದ್ದಾರೆ.
ಹೌದು.. ಹುಬ್ಬಳ್ಳಿಯಲ್ಲೂ ಕನ್ನಡ ನಾಮಫಲಕ ಹೋರಾಟ ಮುನ್ನೆಲೆಗೆ ಬಂದಿದ್ದು, ಕರವೇ ಕಾರ್ಯಕರ್ತರಿಂದ ವಿಭಿನ್ನ ಹೋರಾಟ ನಡೆಸಿದರು. ಧೋತಿ ತೊಟ್ಟು, ಬಾರಕೋಲು ಹಿಡಿದು ಪ್ರತಿಭಟನೆ ನಡೆಸಿದರು. ಹುಬ್ಬಳ್ಳಿಯಲ್ಲಿಯೂ ಕಡ್ಡಾಯವಾಗಿ ಕನ್ನಡ ನಾಮಫಲಕ ಹಾಕುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಿದರು. ಇನ್ನೂ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚೆನ್ನಮ್ಮ ವೃತ್ತದ ಮೂಲಕ ಪ್ರತಿಭಟನೆ ರ್ಯಾಲಿ ಮಾಡಿದ ಪ್ರತಿಭಟನಾಕಾರರು,
ಕನ್ನಡ ನಾಮಫಲಕ ಹಾಕಿದ್ರೆ ಶಾಂತಿ,ಇಲ್ಲದಿದ್ದರೆ ಕ್ರಾಂತಿ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ನಾಮಫಲಕ ಹಾಕಬೇಕು ಇಲ್ಲವಾದರೇ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು. ಒಟ್ಟಿನಲ್ಲಿ ಬೆಂಗಳೂರಿನ ಹೋರಾಟದ ಬೆನ್ನಲ್ಲೇ ಹುಬ್ಬಳ್ಳಿಯಲ್ಲೂ ಕೂಡ ಕ್ರಾಂತಿಯ ಕಿಡಿ ಹತ್ತಿದ್ದು, ಕೂಡಲೇ ನಾಮಫಲಕ ಕಡ್ಡಾಯವನ್ನು ಹಾಕಬೇಕು ಎಂಬುವುದು ಪ್ರತಿಭಟನಾಕಾರರು ಆಗ್ರಹವಾಗಿದೆ.