ವಿಜಯನಗರ: ದಕ್ಷಿಣ ಕಾಶಿ ಹಂಪಿ ಶ್ರೀ ಪಂಪಾ ವಿರೂಪಾಕ್ಷೇಶ್ವರ ಸನ್ನಿಧಿಯಲ್ಲಿ ಫಲಪೂಜಾ ಕಾರ್ಯಕ್ರಮ ಭಕ್ತಸಮೂಹದ ನಡುವೆ ಸಂಭ್ರಮದಿಂದ ಜರುಗಿತು. ಶ್ರೀ ಪಂಪಾ ವಿರೂಪಾಕ್ಷೇಶ್ವರ ಮತ್ತು ತಾಯಿ ಹಂಪಮ್ಮ ದೇವಿಯ ಫಲಪೂಜಾ ಕಾರ್ಯಕ್ರಮದ ನಿಮಿತ್ತ ಬೆಳಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮ ನಡೆದವು. ಸ್ವಾಮಿಗೆ ಅರಸರ ಕಾಲದ ನವರತ್ನ ಖಚಿತ ಸುವರ್ಣಮುಖದೊಂದಿಗೆ ಅಲಂಕಾರ ಮಾಡಲಾಗಿತ್ತು. ರಾಜ್ಯದ ನಾನಾ ಜಿಲ್ಲೆಗಳಿಂದ ಭಕ್ತಾದಿಗಳು ಫಲಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ನಂತರ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ದರ್ಶನ ಪಡೆದರು. ಆಂಧ್ರಪ್ರದೇಶದ ಅನಂತಪುರ, ಕರ್ನೂಲ್, ಕಡಪ, ರಾಜ್ಯದ ಬಳ್ಳಾರಿ, ಹಾವೇರಿ, ರಾಯಚೂರು, ಗದಗ, ಕೊಪ್ಪಳ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ನಾನಾ ಜಿಲ್ಲೆಗಳಿಂದ ಸಾವಿರಾರು ಭಕ್ತರು ಫಲಪೂಜಾ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಹಂಪಿಯ ವಿರೂಪಾಕ್ಷೇಶ್ವರ ದೇಗುಲದ ಆವರಣದಲ್ಲಿ ರಾತ್ರಿ ದೀಪೋತ್ಸವ ನಡೆಯಿತು. ಸ್ವದೇಶಿರು ಸೇರಿ ವಿದೇಶಿ ಪ್ರವಾಸಿಗರು ಕೂಡ ಭಕ್ತರು ದೀಪಗಳನ್ನು ಬೆಳಗಿಸಿದರು.