ತಮ್ಮ ನೆಚ್ಚಿನ ನಟ ದರ್ಶನ್ ಅವರ ಸಿನಿಮಾವನ್ನು ನೋಡಲು ಅವರ ಅಭಿಮಾನಿಗಳು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಡಿಸೆಂಬರ್ 29 ರಂದು ರಾಜ್ಯಾದ್ಯಂತ ಕಾಟೇರ ಸಿನಿಮಾ ರಿಲೀಸ್ ಆಗುತ್ತಿದೆ. ಅದೇ ದಿನದಂದು ರಮ್ಯಾ ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಕೂಡ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಈ ಮಾಹಿತಿಯನ್ನು ರಮ್ಯಾ ಅವರೇ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.
ಸ್ವಾತಿ ಮುತ್ತಿನ ಮಳೆ ಹನಿಯೇ ವಿಚಾರದಲ್ಲಿ ರಮ್ಯಾ ತುಂಬಾನೇ ತಡಮಾಡಿದ್ದರು. ನವೆಂಬರ್ 14, 2022ರಂದೇ ತಮ್ಮ ಚೊಚ್ಚಲ ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿಯೇ (Swati Muthina Male Haniye) ಸಿನಿಮಾ ಶೂಟಿಂಗ್ ಮುಗಿಸಿರುವುದಾಗಿ ರಮ್ಯಾ ಸಂಸ್ಥೆಯು ಹೇಳಿಕೊಂಡಿತ್ತು. ಆನಂತರ ಸಿನಿಮಾ ಯಾವಾಗ ರಿಲೀಸ್ (Release) ಎನ್ನುವ ಕುರಿತು ಮಾಹಿತಿ ನೀಡಿರಲಿಲ್ಲ. 2022 ನವೆಂಬರ್ ನಲ್ಲಿ ಶೂಟಿಂಗ್ ಮುಗಿಸಿದವರು 2023 ನವೆಂಬರ್ 24 ರಂದು ತಮ್ಮ ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದಾಗಿ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ಆದರೆ, ಒಟಿಟಿಯ ಮಾಹಿತಿ ಮಾತ್ರ ವೇಗವಾಗಿ ಹಂಚಿಕೊಂಡಿದ್ದಾರೆ.
ಆಪಲ್ ಬಾಕ್ಸ್ ಸ್ಟುಡಿಯೋಸ್ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾವನ್ನು ರಾಜ್ ಬಿ ಶೆಟ್ಟಿ (Raj B Shetty) ನಿರ್ದೇಶನ ಮಾಡಿದ್ದಾರೆ. ಸಿರಿ ರವಿಕುಮಾರ್ (Siri Ravikumar) ಮತ್ತು ರಾಜ್ ಶೆಟ್ಟಿ ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ನಿರ್ದೇಶನದ ಜೊತೆಗೆ ನಟಿಸಿರುವ ರಾಜ್ ಬಿ ಶೆಟ್ಟಿ ಅವರು ಈ ಚಿತ್ರದಲ್ಲಿ ವಿಶೇಷ ಪಾತ್ರವನ್ನೇ ನಿರ್ವಹಣೆ ಮಾಡಿದ್ದಾರೆ.
ಅಂದುಕೊಂಡಂತೆ ಆಗಿದ್ದರೆ, ಈ ಸಿನಿಮಾದಲ್ಲಿ ರಮ್ಯಾ (Ramya) ಅವರೇ ನಟಿಸಬೇಕಿತ್ತು. ಹಾಗಂತ ಅನೌನ್ಸ್ ಕೂಡ ಆಗಿತ್ತು. ಆದರೆ, ತಾವು ಈ ಸಿನಿಮಾದಲ್ಲಿ ನಟಿಸುತ್ತಿಲ್ಲ, ಕೇವಲ ನಿರ್ಮಾಪಕಿಯಾಗಿ ಮಾತ್ರ ಇರುತ್ತೇನೆ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು ರಮ್ಯಾ. ಈ ವಿಷಯ ತಿಳಿಸಿದ ಕೆಲವೇ ದಿನಗಳ ನಂತರ ಮತ್ತೊಂದು ಸಿಹಿ ಸುದ್ದಿಯನ್ನೂ ನೀಡಿ, ತಾವು ಡಾಲಿ ಧನಂಜಯ್ ಜೊತೆ ಉತ್ತರಕಾಂಡ ಚಿತ್ರದಲ್ಲಿ ನಟಿಸುತ್ತಿರುವುದಾಗಿಯೂ ತಿಳಿಸಿದ್ದರು.