ವ್ಯೂಹಂ ಸಿನಿಮಾ ನಿರ್ದೇಶನ ಮಾಡಿದ್ದಕ್ಕೆ ತಮಗೆ ಕೊಲೆ ಬೆದರಿಕೆ ಹಾಕಲಾಗುತ್ತಿದೆ. ಟಿಡಿಪಿ ಮುಖಂಡ ಕೋಲಿಕಪುಡಿ ಶ್ರೀನಿವಾಸ್ ನಾಯ್ಡು ಎನ್ನುವವರು ಮಾಧ್ಯಮದಲ್ಲಿ ಕೂತು ಬಹಿರಂಗವಾಗಿ ತಮ್ಮನ್ನು ಕೊಲ್ಲಲು ಪ್ರಚೋದನೆ ನೀಡಿದ್ದಾರೆ. ನನ್ನ ತಲೆ ಕತ್ತರಿಸಿದವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ತಗೆದುಕೊಳ್ಳಬೇಕು ಎಂದು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಆಂಧ್ರ ಪೊಲೀಸ್ ರಿಗೆ ಮೊರೆ ಹೋಗಿದ್ದಾರೆ. ಅಧಿಕಾರಿಗಳನ್ನು ಭೇಟಿ ಮಾಡಿ ದೂರಿನ ಪತ್ರವನ್ನು ಸಲ್ಲಿಸಿದ್ದಾರೆ.
ರಾಮ್ ಗೋಪಾಲ್ ವರ್ಮಾ ವಿರುದ್ಧ ಟಿಡಿಪಿ ಕಾರ್ಯಕರ್ತರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ವರ್ಮಾ ನಿರ್ದೇಶನ ಮಾಡಿರುವ ವ್ಯೂಹಂ ಸಿನಿಮಾ ರಿಲೀಸ್ ಮಾಡದಂತೆ ಪ್ರತಿಭಟಿಸಲಾಗುತ್ತಿದೆ. ಈ ಕುರಿತಂತೆ ಮಾಧ್ಯಮದೊಂದಿಗಿನ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿರುವ ಟಿಡಿಪಿ ಮುಖಂಡ ಕೋಲಿಕಪುಡಿ ಶ್ರೀನಿವಾಸ್ ನಾಯ್ಡು (Kolikapudi Srinivas Naidu), ಎಡವಟ್ಟಿನ ಹೇಳಿಕೆಯನ್ನು ನೀಡಿದ್ದರು. ವರ್ಮಾ ತಲೆ ಕಡಿದು ತಂದಿವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಇದರ ವಿರುದ್ಧ ವರ್ಮಾ ದೂರು ನೀಡಿದ್ದಾರೆ.