ಹುಬ್ಬಳ್ಳಿ: ಇಲ್ಲಿಯ ಶ್ರೀ ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಎಚ್.ಎಸ್.ಕೆ. ವಿಜ್ಞಾನ ಸಂಸ್ಥೆಯಲ್ಲಿ ಗಣಿತ ವಿಭಾಗದಿಂದ ಪೈಥಾನ್ ಪ್ರೋಗ್ರಾಮಿಂಗ್ನ ರಾಜ್ಯ ಮಟ್ಟದ ಪ್ರಾಯೋಗಿಕ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಲಾಯಿತು.
ಕೆಎಲ್ಇ ತಾಂತ್ರಿಕ ಸಂಸ್ಥೆಯ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹ ಪ್ರಾಧ್ಯಾಪಕ ಡಾ. ರಾಜೇಶ ಯಕ್ಕುಂಡಿಮಠ ಉದ್ಘಾಟಿಸಿ ಮಾತನಾಡಿ, ಪೈಥಾನ್ ಜನಪ್ರಿಯ ಪ್ರೋಗ್ರಾಮಿಂಗ್ ಭಾಷೆಯಾಗಿದ್ದು, ಇದನ್ನು ಗೈಡೋ ವ್ಯಾನ್ ರೋಸಮ್ ಅಭಿವೃದ್ಧಿಪಡಿಸಿ, 1991ರಲ್ಲಿ ಬಿಡುಗಡೆ ಮಾಡಿದರು.
ವೆಬ್ ಅಭಿವೃದ್ಧಿ (ಸರ್ವರ್-ಸೈಡ್), ತಂತ್ರಾಂಶ ಅಭಿವೃದ್ಧಿ, ಸಿಸ್ಟಮ್ ಸ್ಕ್ರಿಪ್ಟಿಂಗ್, ಗಣಿತ ಮುಂತಾದ ಕ್ಷೇತ್ರಗಳಲ್ಲಿ ಪೈಥಾನ್ ಬಳಸಲಾಗುತ್ತಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಗಿರೀಶ ಸಂಶಿ, ಶ್ರೀಧರ ಚಿನ್ನಿ, ಡಾ. ಪ್ರಭಾ ಮಂಡಲಗೇರಿ ತರಬೇತಿ ನೀಡಿದರು.
ಹುಲಕೋಟಿ, ಶಿರಸಿ, ಹಳಿಯಾಳ, ರಾಣೆಬೆನ್ನೂರು, ಖಾನಾಪುರ, ಕಲಘಟಗಿ, ಧಾರವಾಡ ಸೇರಿ 6 ಜಿಲ್ಲೆಗಳ 90ಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು 11 ಉಪನ್ಯಾಸಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಮನಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸುನೀತಾ ಹಾನಗಲ್ ಅಧ್ಯಕ್ಷತೆ ವಹಿಸಿದ್ದರು. ಗಣಿತ ಉಪನ್ಯಾಸಕಿ ಡಾ. ಅರ್ಚನಾ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಜ್ಯೋತಿ ಗೌಡರ ನಿರೂಪಿಸಿದರು. ಗಣಿತ ವಿಭಾಗದ ಕಾರ್ಯದರ್ಶಿ ರಾಜೇಶ್ವರಿ ಹೂಗಾರ ವಂದಿಸಿದರು