ಬೆಂಗಳೂರು:– ಅಕ್ರಮ ಬಡಾವಣೆ ನಿರ್ಮಿಸಿದರೆ ಜೈಲು ಶಿಕ್ಷೆ ವಿಧಿಸಬಹುದು ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಇನ್ನು ಮುಂದೆ ಯಾರೇ ಅನಧಿಕೃತವಾಗಿ ಬಡಾವಣೆ ನಿರ್ಮಿಸಿ, ಸಂಬಂಧಿತ ಸ್ಥಳೀಯ ಸಂಸ್ಥೆಗಳಿಂದ ನಕ್ಷೆ ಮಂಜೂರಾತಿ ಇಲ್ಲದೆ ಕಟ್ಟಡ ನಿರ್ಮಿಸಿದರೆ ಅಂತಹವರಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವಂತೆ ಕಾನೂನಿಗೆ ತಿದ್ದುಪಡಿ ತರುವುದು ಅಗತ್ಯ. ಇಲ್ಲವಾದರೆ ಅನಧಿಕೃತ ಬಡಾವಣೆಗಳು ರಾಜ್ಯದಾದ್ಯಂತ ನಾಯಿಕೊಡೆಗಳಂತೆ ತಲೆ ಎತ್ತುತ್ತಲೇ ಇರುತ್ತವೆ. ಹೀಗಾಗಿ ಕಾನೂನು ತಂದು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.
ಯಾರೇ ನ್ಯಾಯಸಮ್ಮತವಾಗಿ ಸಾರ್ವಜನಿಕ ಉದ್ದೇಶಕ್ಕೆ ಜಾಗ ಬಿಟ್ಟು ಬಡಾವಣೆ ನಿರ್ಮಿಸಲು ಮುಂದಾದರೆ ಮತ್ತು ಮನೆ ನಿರ್ಮಾಣ ಮಾಡಲು ನಿಯಮಾನುಸಾರ ನಕ್ಷೆ ಮಂಜೂರಾತಿ ಬಯಸಿದಲ್ಲಿ ನಿಯಮ ಸರಳೀಕರಣ ಮಾಡಿ, ಮುಖಾಮುಖಿ ರಹಿತವಾಗಿ ನಿರ್ದಿಷ್ಟ ಕಾಲಮಿತಿಯೊಳಗೆ ಮಂಜೂರಾತಿ ಲಭಿಸುವಂತೆ ತಂತ್ರಾಂಶ ಅಭಿವೃದ್ಧಿ ಪಡಿಸುವ ಅಗತ್ಯವನ್ನೂ ಪ್ರತಿಪಾದಿಸಿದರು.
ಯಾರೊಬ್ಬರೂ ನಕಲಿ ಖಾತೆ ಪಡೆದು ನೋಂದಣಿ ಮಾಡಿಸದಂತೆ ‘ಕಾವೇರಿ’ ತಂತ್ರಾಂಶದಲ್ಲಿ ಮಾರ್ಪಾಡು ಮಾಡಿದರೆ ಆಗ ಅನಧಿಕೃತ ಬಡಾವಣೆ, ಕಟ್ಟಡಗಳನ್ನು ನಿಯಂತ್ರಿಸಬಹುದು ಎಂದು ಈಶ್ವರ ಖಂಡ್ರೆ ಸಲಹೆ ನೀಡಿದರು.
ನೂತನವಾಗಿ ಯಾವುದೇ ಸಮುಚ್ಚಯಗಳನ್ನು, ಗುಂಪು ಮನೆಗಳನ್ನು ಮತ್ತು ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸುವಾಗ ಜಲ ಕಾಯಿದೆ, ವಾಯು ಕಾಯಿದೆ ಮತ್ತು ಪರಿಸರ ಸಂರಕ್ಷಣೆ ಕಾಯಿದೆ ಉಲ್ಲಂಘಿಸಿ ಕಟ್ಟಡ ನಿರ್ಮಿಸುವವರ ವಿರುದ್ಧ ಕಾನೂನು ರೀತ್ಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.