ಬೆಂಗಳೂರು: ಬಿಜೆಪಿಯವರದ್ದು ಡೋಂಗಿ ಹಿಂದುತ್ವದಂತೆ ಅವರಲ್ಲಿ ಸಾಮಾಜಿಕ ನ್ಯಾಯವಿಲ್ಲ ನಮ್ಮಕಾಂಗ್ರೆಸ್ನಿಂದ ಮಾತ್ರ ಸಾಮಾಜಿಕ ನ್ಯಾಯ ಉಳಿದಿರುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯ ಭಾರತ್ ಜೋಡೊ ಸಭಾಂಗಣದಲ್ಲಿ ನಡೆದ 139ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಬಿಜೆಪಿ, ಜನಸಂಘ, ಆರೆಸ್ಸೆಸ್ ಮತ್ತು ಸಂಘ ಪರಿವಾರದ ಒಬ್ಬೇ ಒಬ್ಬರು ಬ್ರಿಟಿಷರ ವಿರುದ್ಧ ಹೋರಾಟ ಮಾಡಿಲ್ಲ. ಬ್ರಿಟಿಷರ ಅವಧಿಯಲ್ಲೇ ಅರೆಸ್ಸೆಸ್ ಹುಟ್ಟಿತ್ತು. ಆದರೆ, ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಒಂದು ದಿನವೂ ಭಾಗವಹಿಸಲಿಲ್ಲ. ಬಿಜೆಪಿಯ ಡೋಂಗಿತನವನ್ನು ಜನರಿಗೆ ಮನವರಿಕೆ ಮಾಡಬೇಕಿದೆ’ ಎಂದರು.
‘ಹಿಂದೂ ಬೇರೆ. ಹಿಂದುತ್ವವೇ ಬೇರೆ. ನಾವು ರಾಮನನ್ನು ಪೂಜಿಸುವುದಿಲ್ಲವೇ? ನಮ್ಮೂರುಗಳಲ್ಲಿ ರಾಮಮಂದಿರ ಕಟ್ಟಿಲ್ಲವೇ? ರಾಮನ ಭಜನೆ ಮಾಡುವುದಿಲ್ಲವೇ?’ ಎಂದೂ ಪ್ರಶ್ನಿಸಿದರು. ‘ನೆಹರೂ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ವಿಜ್ಞಾನ ಮತ್ತು ತಂತ್ರಜ್ಞಾನದ ಆಧುನಿಕ ಭಾರತದ – ನಿರ್ಮಾತೃಗಳು.
ಇಂಟರ್ ನೆಟ್ ದೇಶದ ತುಂಬ ವಿಸ್ತರಿಸಲು ಅಡಿಪಾಯ ಹಾಕಿದವರು ರಾಜೀವ್ ಗಾಂಧಿ, ಬಿಜೆಪಿಯವರು ಬುರುಡೆ ಬಿಡುವುದನ್ನು ಬಿಟ್ಟು ಬೇರೇನು ಮಾಡಿದ್ದಾರೆ. ಸತ್ಯದ ತಲೆ ಮೇಲೆ ಹೊಡೆದಂತೆ ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸಿಮರು’ ಎಂದರು.
‘ಸ್ವಾತಂತ್ರ್ಯದ ಹೊಸ್ತಿಲಲ್ಲಿ ಭಾರತದ ತುಂಬ ಸಾವಿರಾರು ಸಮಸ್ಯೆಗಳಿದ್ದವು. ಆ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ ಬಂದಿದ್ದು ಕಾಂಗ್ರೆಸ್, ಈಗಲೂ ಹಲವು ಸಮಸ್ಯೆಗಳಿವೆ. ಇವುಗಳ ಪರಿಹಾರಕ್ಕೂ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ ಎಂದರು.