ಬೆಂಗಳೂರು:- ಅಂಗಡಿ ಮುಂಗಟ್ಟುಗಳ ಮುಂದೆ ಕನ್ನಡ ನಾಮಫಲಕ ಕಡೆಗಣನೆ ವಿರೋಧಿಸಿ ಕರವೇ ಸಂಘಟನೆ ಇಂಗ್ಲಿಷ್ ಬೋರ್ಡ್ ಹರಿದು ಆಕ್ರೋಶ ಹೊರಹಾಕಿತ್ತು. ಪ್ರತಿಭಟನೆ ಅತಿರೇಕಕ್ಕೆ ತಿರುಗಿ ಕಲ್ಲು ತೂರಟ ಕೂಡ ನಡೆದಿತ್ತು. ಈ ಹಿನ್ನೆಲೆ ಕರವೇ ಕಾರ್ಯಕರ್ತರನ್ನು ಬಂಧಿಸಲಾಗಿತ್ತು.
ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಸೇರಿ 29 ಕರವೇ ಕಾರ್ಯಕರ್ತರನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ. ಫಲಕದಲ್ಲಿ ಕಡ್ಡಾಯ ಕನ್ನಡ ಬಳಕೆಗೆ ಆಗ್ರಹಿಸಿ ಕರವೇ ನಡೆಸಿದ ಪ್ರತಿಭಟನೆ ವೇಳೆ ನಾರಾಯಣಗೌಡ ಸೇರಿ 29 ಕರವೇ ಕಾರ್ಯಕರ್ತರನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಒಪ್ಪಿಸಿದ್ದು ಬೆಂಗಳೂರು ಗ್ರಾ. ಜಿಲ್ಲೆಯ ದೇವನಹಳ್ಳಿ JMFC ಕೋರ್ಟ್ ಜಡ್ಜ್ ಕರವೇ ಕಾರ್ಯಕರ್ತರಿಗೆ ಜನವರಿ 10ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದ್ದಾರೆ.
ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ನಾರಾಯಣಗೌಡ, ನೂರು ಬಾರಿ ಜೈಲಿಗೆ ಕಳುಹಿಸಿದರೂ ನಾವು ಹೆದರಲ್ಲ. ರಾಜ್ಯ ಸರ್ಕಾರ ನಮ್ಮ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಇನ್ನೂ 100 ಕೇಸ್ ಹಾಕಿದರೂ ಹೋರಾಟ ಹತ್ತಿಕ್ಕಲು ಆಗಲ್ಲ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಾನು ಪ್ರವಾಸ ಮಾಡುತ್ತೇನೆ. ಕನ್ನಡ ಇಲ್ಲದ ನಾಮಫಲಕ ಕಿತ್ತೊಗೆಯುತ್ತೇವೆ.
ನಮ್ಮ ನಾಡಿನ ಇತಿಹಾಸಕ್ಕಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಪೊಲೀಸರ ಮೇಲೆ ನಾವು ಹಲ್ಲೆ ಮಾಡಿದ್ದೇವೆ ಅನ್ನೋದು ಸುಳ್ಳು. ಪೊಲೀಸರ ಮೇಲೆ ಹಲ್ಲೆ ಮಾಡಿದ್ದನ್ನು ತೋರಿಸಿ. ನಮ್ಮ ಪೊಲೀಸರ ಮೇಲೆ ನಮಗೆ ಗೌರವ ಹಾಗೂ ಕಳಕಳಿ ಇದೆ ಎಂದಿದ್ದಾರೆ.