ಮಂಗಳೂರು:- ರಾಜ್ಯಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಕರಾವಳಿಯಲ್ಲಿ ಮಾತ್ರ ವಾಡಿಕೆಯ ಮಳೆ ಸುರಿದಿದೆ. ಅಕ್ಟೋಬರ್ 1ರಿಂದ ಡಿಸೆಂಬರ್ 27ರ ವರೆಗೆ ದಕ್ಷಿಣ ಒಳನಾಡಿನಲ್ಲಿ ಶೇ. 31, ಉತ್ತರ ಒಳನಾಡಿನಲ್ಲಿ ಶೇ. 69 ಮತ್ತು ಮಲೆನಾಡಿನಲ್ಲಿ ಶೇ. 15ರಷ್ಟು ಮಳೆ ಕೊರತೆ ಉಂಟಾಗಿದೆ. ಕೇವಲ ಕರಾವಳಿದಲ್ಲಿ ಮಾತ್ರ ಶೇ. 5ರಷ್ಟು ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಈ ಬಾರಿ ಮಳೆ ಪ್ರಮಾಣ ವಾಡಿಕೆಗಿಂತ ಹೆಚ್ಚಳವಾಗುವ ನಿರೀಕ್ಷೆ ಇದೆ.
ಕಳೆದ ಏಳು ವರ್ಷಕ್ಕೆ ಹೋಲಿಸಿದರೆ ಕರಾವಳಿಯಲ್ಲಿ ಕೇವಲ ಮೂರು ಬಾರಿ ಮಾತ್ರ ವಾಡಿಕೆ ಮಳೆ ಸುರಿದಿತ್ತು. 2018ರಲ್ಲಿ ಶೇ.-28, 2019ರಲ್ಲಿ ಶೇ. 124, 2020ರಲ್ಲಿ ಶೇ. 27, 2021ರದಲ್ಲಿ ಶೇ. 122 ಮತ್ತು 2022ರಲ್ಲಿ ಅಂದರೆ ಕಳದೆ ವರ್ಷ ಶೇ. 14ರಷ್ಟು ಮಳೆ ಕೊರತೆ ಉಂಟಾಗಿತ್ತು. ಆದರೆ ಈ ವರ್ಷ ಸದ್ಯ ಶೇ. 5ರಷ್ಟು ಮಳೆ ಪ್ರಮಾಣದಲ್ಲಿ ಏರಿಕೆ ಇದೆ.
ದ.ಕ., ಉಡುಪಿ ಜಿಲ್ಲೆಯಲ್ಲಿ ವಾಡಿಕೆ ಮಳೆ ಸುರಿದರೂ ಉಭಯ ಜಿಲ್ಲೆಗಳ 5 ತಾಲೂಕುಗಳಲ್ಲಿ ಮಳೆ ಕೊರತೆ ಇದೆ. ಮೂಲ್ಕಿಯಲ್ಲಿ ಶೇ. 1, ಕುಂದಾಪುರದಲ್ಲಿ ಶೇ. 4, ಬೈಂದೂರಿನಲ್ಲಿ ಶೇ. 14, ಬ್ರಹ್ಮಾವರದಲ್ಲಿ ಶೇ. 25 ಮತ್ತು ಕಾಪುವಿನಲ್ಲಿ ಶೇ. 2ರಷ್ಟು ಮಳೆ ವಾಡಿಕೆಗಿಂತ ಕಡಿಮೆ ಸುರಿದಿದೆ. ಆದರೆ ಬೆಳ್ತಂಗಡಿಯಲ್ಲಿ ಶೇ. 43, ಬಂಟ್ವಾಳ ಶೇ. 66, ಮಂಗಳೂರು ಶೇ. 15, ಪುತ್ತೂರು ಶೇ. 50, ಸುಳ್ಯ ಶೇ. 41, ಮೂಡುಬಿದಿರೆ ಶೇ. 36, ಕಡಬ ಶೇ. 68, ಉಳ್ಳಾಲ ಶೇ. 74, ಕಾರ್ಕಳ ಶೇ. 10, ಉಡುಪಿ ಶೇ. 0 ಮಳೆ ಹೆಚ್ಚಳ ಕಂಡಿದೆ.
ಕರಾವಳಿಯಲ್ಲಿ ಸದ್ಯ ತುಸು ಚಳಿ ಆರಂಭಗೊಂಡಿದ್ದು, ಇನ್ನು ಹಿಂಗಾರು ಮಳೆ ಅನುಮಾನ ಎನ್ನಬಹುದು. ಸದ್ಯದ ಮುನ್ಸೂಚನೆಯ ಪ್ರಕಾರ ಈ ಮಾಸಾಂತ್ಯಕ್ಕೆ ಕೆಲವು ಕಡೆ ತುಂತುರು ಮಳೆ ಸುರಿಯಬಹುದು.