ಬೆಂಗಳೂರು:- ಪಕ್ಷದ ವರಿಷ್ಠರ ವಿರುದ್ಧ ಮಾಜಿ ಸಿಎಂ ಸದಾನಂದಗೌಡ ಅವರು ಅಸಮಾಧಾನ ಹೊರ ಹಾಕಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಪಕ್ಷದ ಕೇಂದ್ರ ನಾಯಕರು ರಾಜ್ಯಕ್ಕೆ ಭೇಟಿ ನೀಡಿ ಯಾರ್ಯಾರಿಗೆ ಏನು ಹೇಳಬೇಕೋ ಅದನ್ನು ಹೇಳಿ ಹೋಗಬೇಕು. ಕೇಂದ್ರದಿಂದ ತಂಡವೊಂದು ಆಗಮಿಸಿ ಈಗ ಬೇಸರಗೊಂಡಿರುವ ಮುಖಂಡರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸೂಕ್ತ ವೇದಿಕೆ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಪಕ್ಷದಲ್ಲಿ ಸಮಾಲೋಚನೆಗೆ ಆದ್ಯತೆ ನೀಡಬೇಕಾಗಿದೆ. ಆದರೆ, ಕರ್ನಾಟಕಲ್ಲಿ ಬಿಜೆಪಿಗೆ ಹೇಳುವವರು ಕೇಳುವವರು ಯಾರೂ ಇಲ್ಲ. ಸರ್ವಾಧಿಕಾರಿ ಮನೋಭಾವ ಬಿಜೆಪಿಯಲ್ಲಿ ಬಂದಿದೆ ಎಂದು ಕಾರ್ಯಕರ್ತರು ಮಾತನಾಡುತ್ತಿದ್ದಾರೆ. ಹೀಗಾಗಿ ಸರ್ವಾಧಿಕಾರಿ ಧೋರಣೆ ದೂರ ಆಗಬೇಕು ಎಂದೂ ಅವರು ತೀಕ್ಷ್ಣವಾಗಿ ಹೇಳಿದ್ದಾರೆ.
ಪಕ್ಷದಲ್ಲಿ ಕೆಲವೊಂದು ತೀರ್ಮಾನಗಳು ಏಕಪಕ್ಷೀಯವಾಗಿ ನಡೆಯುತ್ತಿವೆ. ಇದು ಸರಿಯಲ್ಲ ಕ್ರಮವಲ್ಲ. ಸಮಾಲೋಚನೆ ನಡೆಸಬೇಕಾಗಿದೆ. ಪಕ್ಷದ ಕೆಲವರಿಗೆ ಚರ್ಚೆ ಮಾಡದೆ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂಬ ಭಾವನೆ ಬಂದಿದೆ. ಇದನ್ನು ಹೋಗಲಾಡಿಸಬೇಕಾಗಿದೆ. ಸರ್ವಾಧಿಕಾರಿ ಧೋರಣೆ ಅನುಸರಿಸಿದರೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಎಂತಹ ಸನ್ನಿವೇಶಗಳನ್ನು ಎದುರಿಸಿದರು ಎಂಬುದನ್ನು ಗಮನಿಸಿದ್ದೇವೆ. ಇದಕ್ಕೆ ಆಸ್ಪದ ನೀಡಬಾರದು ಎಂದು ಹೇಳಿದರು.
ರಾಜ್ಯದಲ್ಲಿ ಹೊಸ ಘಟಕ ರಚನೆಯಾಗಿದೆ. ಪಕ್ಷದ ರಾಜ್ಯಾಧ್ಯಕ್ಷ, ಪ್ರತಿಪಕ್ಷ ನಾಯಕ, ಪದಾಧಿಕಾರಿಗಳ ನೇಮಕ ಎಲ್ಲವೂ ನಡೆದಿದೆ. ಆದರೂ ಪಕ್ಷದ ಆಂತರಿಕ ವ್ಯವಸ್ಥೆ ಸರಿಹೋಗಿಲ್ಲ. ಡಜನ್ಗಟ್ಟಲೇ ವ್ಯಕ್ತಿಗಳು ಪಕ್ಷದ ಪ್ರಮುಖ ಸ್ಥಾನದಲ್ಲಿರುವವರ ಕುರಿತು ನಿರಂತವಾಗಿ ಹೇಳಿಕೆ ನೀಡುತ್ತಿದ್ದಾರೆ. ಈ ಬಗ್ಗೆ ಪಕ್ಷದ ಪ್ರಮುಖರು ಯಾರೂ ಪ್ರಶ್ನಿಸುತ್ತಿಲ್ಲ. ಚುನಾವಣೆಯಲ್ಲಿ ಹೊಂದಾಣಿಕೆ ಆಗಿದೆ ಎನ್ನುವ ಆರೋಪದ ಬಗ್ಗೆಯೂ ಚರ್ಚೆ ಆಗಬೇಕಿತ್ತು. ಅದು ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.