ಬಾಲಿವುಡ್ ನ ಮತ್ತೊಂದು ಭಾರೀ ಬಜೆಟ್ ಸಿನಿಮಾ ಡಂಕಿ ಮೊನ್ನೆಯಷ್ಟೇ ರಿಲೀಸ್ ಆಗಿದೆ. ಸಲಾರ್ ಎದುರು ಈ ಸಿನಿಮಾ ಅಬ್ಬರಿಸುತ್ತಾ ಅಥವಾ ಸೋಲು ಕಾಣುತ್ತಾ ಎನ್ನುವ ಚರ್ಚೆ ಕೂಡ ಶುರುವಾಗಿತ್ತು. ಸಲಾರ್ ಮುಂದೆ ತುಸು ಮುಗ್ಗರಿಸಿದ್ದರೂ, ತನ್ನ ಪಾಡಿಗೆ ತಾನು ತಣ್ಣಗೆ ಗೆಲುವಿನತ್ತ ಹೆಜ್ಜೆ ಹಾಕಿದೆ. ಡಂಕಿ ಸಿನಿಮಾದ ನಿರ್ಮಾಣ ಸಂಸ್ಥೆಯೇ ಹೇಳಿಕೊಂಡಂತೆ, ವಾರಂತ್ಯಕ್ಕೆ ಡಂಕಿ ಗಳಿಸಿದ್ದು 211.13 ಕೋಟಿ ರೂಪಾಯಿ ಎಂದು ಘೋಷಣೆ ಮಾಡಿದೆ.
ಒಂದು ಕಡೆ ಸಿನಿಮಾ ಕೋಟಿ ಕೋಟಿ ಗಳಿಸುತ್ತಿದ್ದರೆ, ಮತ್ತೊಂದು ಕಡೆ ಪೈರಸಿ ಹಾವಳಿ ಕೂಡ ಚಿತ್ರದ ಹಿನ್ನೆಡೆಗೆ ಕಾರಣವಾಗುತ್ತಿದೆ. ಡಂಕಿ (Dunki) ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗಿದೆ. ನೆಚ್ಚಿನ ನಟನ ಸಿನಿಮಾವನ್ನು ಶಾರುಖ್ ಅಭಿಮಾನಿಗಳು ಕಣ್ತುಂಬಿಕೊಳ್ಳುತ್ತಿದ್ದಾರೆ. ಎಲ್ಲ ಕಡೆ ಉತ್ತಮ ಓಪನಿಂಗ್ ಪಡೆದುಕೊಂಡಿದೆ. ಈ ನಡುವೆ ಡಂಕಿ ಸಿನಿಮಾ ಪೈರಸಿಗೆ (Piracy) ತುತ್ತಾಗಿದೆ. ಹಲವು ವೆಬ್ ಸೈಟ್ ಗಳಲ್ಲಿ ಡಂಕಿ ಸಿನಿಮಾದ ಪೈರಸಿಯನ್ನು ಅಪ್ ಲೋಡ್ ಮಾಡುವ ಮೂಲಕ ಚಿತ್ರತಂಡಕ್ಕೆ ಶಾಕ್ ನೀಡಲಾಗಿದೆ.
ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಿದ್ದು ಮಾತ್ರವಲ್ಲ, ಮುಕ್ಕಾಲು ಭಾಗ ಸಿನಿಮಾವನ್ನು ಎಕ್ಸ್ (ಟ್ವೀಟರ್) ನಲ್ಲಿ ಲೈವ್ ಕೂಡ ಮಾಡಿರುವ ವಿಷಯ ಹರಿದಾಡುತ್ತಿದೆ. ಹೀಗಾಗಿ ಸಹಜವಾಗಿಯೇ ಚಿತ್ರತಂಡಕ್ಕೆ ಹೊಡೆತ ಬಿದ್ದಿದೆ. ಪೈರಸಿಯನ್ನು ತೆಗೆದು ಹಾಕಿಸುವಲ್ಲಿ ನಿರ್ಮಾಪಕರು ಹರಸಾಹಸ ಪಡುತ್ತಿದ್ದಾರೆ.
ನಾಲ್ಕು ರಾಷ್ಟ್ರಪ್ರಶಸ್ತಿ ಗೆದ್ದಿರುವ ಸ್ಟಾರ್ ಡೈರೆಕ್ಟರ್ ರಾಜ್ ಕುಮಾರ್ ಹಿರಾನಿ (Raj Kumar Hirani) ಡಂಕಿ ಸಿನಿಮಾದ ಸೂತ್ರಧಾರ. ಮುನ್ನಾ ಬಾಯ್ ಎಂಬಿಬಿಎಸ್, 3 ಈಡಿಯಟ್ಸ್, ಪಿಕೆ, ಸಂಜುನಂತಹ ಸೂಪರ್ ಡೂಪರ್ ಹಿಟ್ ಚಿತ್ರ ಕೊಟ್ಟಿರುವ ಹಿರಾನಿ, ಈ ಬಾರಿ ಐದು ಜನ ಸ್ನೇಹಿತರ ಕಥೆ ಹೇಳಿದ್ದಾರೆ. ಒಂದೊಳ್ಳೆ ಸಂದೇಶದ ಜೊತೆಗೆ ಮನರಂಜನಾತ್ಮಕ ಅಂಶಗಳನ್ನು ಬೆರೆಸಿ ಸಿನಿಮಾ ಮಾಡಿದ್ದಾರೆ.