ಪ್ರಥಮ ಟೆಸ್ಟ್ ಪಂದ್ಯದ ಮೊದಲ ದಿನವೇ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಗಳನ್ನು ತಬ್ಬಿಬ್ಬುಗೊಳಿಸಿದ ದಕ್ಷಿಣ ಆಫ್ರಿಕಾದ ಬಲಗೈ ವೇಗಿ ಕಗಿಸೊ ರಬಾಡ 5 ವಿಕೆಟ್ ಸಾಧನೆ ಮಾಡಿದ್ದಾರೆ. ಆ ಮೂಲಕ ಹರಿಣಿಗಳ ಪರ 500 ಅಂತಾರಾಷ್ಟ್ರೀಯ ವಿಕೆಟ್ ಪಡೆದ 7ನೇ ಬೌಲರ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
24 ರನ್ ಗಳಾಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದ್ದ ಟೀಮ್ ಇಂಡಿಯಾಗೆ ಕ್ಲಾಸ್ ಆಟಗಾರ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ 4ನೇ ವಿಕೆಟ್ ಗೆ 68 ರನ್ ಗಳ ಜೊತೆಯಾಟ ನೀಡಿದ್ದರು. ಆದರೆ ಭೋಜನ ವಿರಾಮದ ನಂತರ ಶ್ರೇಯಸ್ ಅಯ್ಯರ್ (31 ರನ್) ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಕಗಿಸೊ ರಬಾಡ ಟೀಮ್ ಇಂಡಿಯಾಗೆ ಮತ್ತೊಮ್ಮೆ ಆಘಾತ ನೀಡಿದರು.
ಆಧುನಿಕ ಕ್ರಿಕೆಟ್ ನ ದಿಗ್ಗಜ ವಿರಾಟ್ ಕೊಹ್ಲಿ (38 ರನ್) ಕಗಿಸೊ ರಬಾಡ ಬೌಲಿಂಗ್ನಲ್ಲಿ ಔಟ್ ಸೈಡ್ ದಿ ಆಫ್ ಸ್ಟಂಪ್ ಎಸೆತವನ್ನು ಆಡಲು ಹೋಗಿ ವಿಕೆಟ್ ಕೀಪರ್ಗೆ ಕ್ಯಾಚಿತ್ತು ನಿರ್ಗಮಿಸಿದರು. ನಂತರ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (8 ರನ್) ಹಾಗೂ ಶಾರ್ದೂಲ್ ಠಾಕೂರ್ (24 ರನ್) ಅವರ ವಿಕೆಟ್ ಪಡೆದ ಬಲಗೈ ವೇಗಿ 5 ವಿಕೆಟ್ ಸಾಧನೆ ಮೆರೆದರು.