ಯಡ್ರಾಮಿ:- ಹತ್ತಿ ಬೆಳೆ ಇಳುವರಿ ಕಡಿಮೆಯಾಗಿರುವ ಜೊತೆಗೆ ಅದರ ಬೆಲೆಯೂ ಕುಸಿತ ಕಂಡಿರುವ ಘಟನೆ ಯಡ್ರಾಮಿಯಲ್ಲಿ ಜರುಗಿದೆ.
ತಿಂಗಳ ಹಿಂದೆ ಹತ್ತಿ ಬೆಳೆಗೆ ಪ್ರತಿ ಕ್ವಿಂಟಲ್ಗೆ ₹11 ಸಾವಿರದಿಂದ ₹13 ಸಾವಿರ ಬೆಲೆ ಇತ್ತು. ಹತ್ತಿ ಬಿಡಿಸಿ ಮನೆಗೆ ತರುವ ಹೊತ್ತಿಗೆ ₹7 ಸಾವಿರದ ಆಸುಪಾಸು ಮಾರಾಟವಾಗುತ್ತಿತ್ತು. ಈಗ ಅದರ ಬೆಲೆ ₹5 ಸಾವಿರದಿಂದ ₹6 ಸಾವಿರ ಆಗಿದೆ. ಕೂಲಿ ಕಾರ್ಮಿಕರಿಗೆ ಹೆಚ್ಚಿನ ಹಣ ನೀಡಿ ಹತ್ತಿ ಬಿಡಿಸಿ ಮನೆಗೆ ತಂದಿದ್ದ ರೈತರಿಗೆ ಇದು ನುಂಗಲಾರದ ತುತ್ತಾಗಿದೆ.
ಪ್ರತಿ ವರ್ಷ ಹತ್ತಿ ಬೆಳೆ ಬೆಳೆಯುವುದರಲ್ಲಿ ಯಡ್ರಾಮಿ, ಜೇವರ್ಗಿ ತಾಲ್ಲೂಕುಗಳು ಮುಂಚೂಣಿಯಲ್ಲಿರುತ್ತವೆ. ಯಡ್ರಾಮಿ ತಾಲ್ಲೂಕಿನಲ್ಲಿ ಕಳೆದ ಬಾರಿ 28,808 ಹೆಕ್ಟೇರ್ ಪ್ರದೇಶದಲ್ಲಿ ರೈತರು ಹತ್ತಿ ಬೆಳೆದಿದ್ದರು. ಮಳೆ ಕೂಡ ಚೆನ್ನಾಗಿ ಆಗಿದ್ದರಿಂದ ಇಳುವರಿ ಚೆನ್ನಾಗಿ ಬಂದಿತ್ತು. ಇದರ ಜೊತೆಗೆ ಬೆಲೆ ಕೂಡ ಉತ್ತಮ ಸಿಕ್ಕ ಕಾರಣಕ್ಕೆ ರೈತರು ಉತ್ತಮ ಲಾಭ ಪಡೆದಿದ್ದರು. ಈ ಸಲವೂ ಕಳೆದ ಹೆಚ್ಚಿನ ಬೆಲೆ ಸಿಗುತ್ತದೆ ಎಂದು ತಾಲ್ಲೂಕಿನ ರೈತರು 29,130 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆದಿದ್ದಾರೆ. ಆದರೆ ರೈತರಿಗೆ ಮಳೆ ಬಾರದ ಕಾರಣಕ್ಕೆ ಬರದ ಪರಿಣಾಮ ಎದುರಾಗಿದೆ.