ಬೆನಿ (ರಿಪಬ್ಲಿಕ್ ಆಫ್ ಕಾಂಗೊ): ಕಾಂಗೋದ (Congo Rains) ಕಸಾಯಿ ಪ್ರದೇಶದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಕನಿಷ್ಠ 22 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕಾಂಗೋದ ಕಸಾಯಿ-ಮಧ್ಯ ಪ್ರಾಂತ್ಯದಲ್ಲಿ ಮಂಗಳವಾರ ಭಾರೀ ಪ್ರಮಾಣದಲ್ಲಿ ಮಳೆ ಸುರಿಯಿತು. ಪ್ರದೇಶದಲ್ಲಿ ಪ್ರವಾಹ ಉಂಟಾಗಿ ಜನಜೀವನ ಅಸ್ತವ್ಯಸ್ತವಾಯಿತು. ಮೂಲಸೌಕರ್ಯವಿಲ್ಲದೇ ಸ್ಥಳೀಯ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಕನಂಗಾ ಪಟ್ಟಣದ ಅಧಿಕಾರಿಗಳು ತಿಳಿಸಿದ್ದಾರೆ
ಧಾರಾಕಾರ ಮಳೆಯಿಂದಾಗಿ ಅಲ್ಲಲ್ಲಿ ಭೂಕುಸಿತ ಉಂಟಾಗಿದೆ. ಹಲವೆಡೆ ಮನೆಗಳು, ಚರ್ಚ್ಗಳು ಮತ್ತು ರಸ್ತೆಗಳು ಸಹ ಕುಸಿತ ಕಂಡಿವೆ. ಪರಿಣಾಮವಾಗಿ ಅನೇಕರು ಸಾವಿಗೀಡಾಗಿದ್ದು, ಅವರು ಕುಟುಂಬಸ್ಥರು ನಿರಾಶ್ರಿತರಾಗಿದ್ದಾರೆ.
ಕನಂಗಾದ ಕಮ್ಯೂನ್ಗೆ ಹೆಚ್ಚಿನ ಪ್ರಮಾಣದ ಹಾನಿಯಾಗಿದೆ ಎಂದು ಗವರ್ನರ್ ಜಾನ್ ಕಬೆಯಾ ತಿಳಿಸಿದ್ದಾರೆ. ಹಾನಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲಾಗುವುದು ಎಂದು ಪ್ರಾಂತೀಯ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಸೂಕ್ತವಲ್ಲದ ಜಾಗದಲ್ಲಿ ಮನೆಗಳನ್ನು ನಿರ್ಮಿಸಿದ್ದೇ ಈ ಸಾವುಗಳಿಗೆ ಕಾರಣವಾಗಿದೆ. ಮನೆಗಳ ಗೋಡೆಗಳು ಕುಸಿದು ಹೆಚ್ಚಿನ ಜೀವಹಾನಿಯಾಗಿದೆ ಎಂದು ಕನಂಗಾ ಮೇಯರ್ ರೋಸ್ ಮುವಾಡಿ ಮುಸುಬೆ ತಿಳಿಸಿದ್ದಾರೆ.