ನೆಲಮಂಗಲ:– ಉದ್ಭವ ಗಣೇಶ ಜಾತ್ರೆಯಲ್ಲಿ ಪುಂಡರ ಹಾವಳಿಯಿಂದ ಅಂಗಡಿಕಾರರು ರೋಸಿ ಹೋಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪಟ್ಟಣದಲ್ಲಿ ಜರುಗಿದೆ.
ಪುಂಡರು ರೌಡಿಶೀಟರ್ ರಂಗ ಅಲಿಯಾಸ್ ಗಣೇಶನ ಗುಡಿ ರಂಗ ಹೆಸರಿನಲ್ಲಿ ಜಾತ್ರೆಯಲ್ಲಿ ವ್ಯಾಪಾರಿಗಳ ಬಳಿ ಹಣ ವಸೂಲಿ ಮಾಡುತ್ತಿದ್ದರು. ಈ ವಿಚಾರ ತಿಳಿದ ನೆಲಮಂಗಲ ಟೌನ್ ಠಾಣೆ ಪೊಲೀಸರು ಸ್ಥಳೀಯರ ನೆರವಿನಿಂದ ಆರೋಪಿಗಳನ್ನು ವಶಕ್ಕೆ ಪಡೆದರು. ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುಂಡರು ಜಾತ್ರೆಯಲ್ಲಿ ಯುವತಿಯರು ಕಂಡರೇ ಪೀಪಿ ಊದಿ ಕರ್ಕಶ ಶಬ್ದ ಮಾಡಿ ಜನರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದರು. ಈ ರೀತಿ ಉಪಟಳ ನೀಡುತ್ತಾ ವಿಕೃತ ಆನಂದ ಪಡೆಯುತ್ತಿದ್ದರು. ಹೀಗಾಗಿ ಪುಂಡರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ಮತ್ತೊಂದಡೆ ಮಂಗಳಮುಖಿಯರ ಉಪಟಳ ಮಿತಿಮೀರಿದೆ. ಹೌದು ಮಂಗಳಮುಖಿಯರು ಕೂಡ ವ್ಯಾಪಾರಿಗಳ ಬಳಿ ಹಣ ವಸೂಲಿ ಮಾಡುತ್ತಿದ್ದಾರೆ. ಹಣ ಕೊಡದಿದ್ದರೇ ಬಟ್ಟೆ ಎತ್ತಿ ತೋರಿಸಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಹಣ ಕೊಡದ ಅಂಗಡಿಯಲ್ಲಿನ ಸಾಮಾನುಗಳನ್ನ ಎತ್ತಿ ಬಿಸಾಡುತ್ತಿದ್ದರು. ಈ ಮಂಗಳಮುಖಿಯರ ಕೈಯಿಂದ ತಪ್ಪಿಸಿಕೊಳ್ಳಲು ವ್ಯಾಪಾರಿಗಳು ಸೆಣಸಾಡಿದರು.
ಇಷ್ಟೇ ಅಲ್ಲದೆ ಮಂಗಳಮುಖಿಯರು ಹಣ ಕೊಡದ ಅಂಗಡಿಗಳ ಮುಂದೆ ಗಲಾಟೆ ಮಾಡಿ, ಅಂಗಡಿ ಮಾಲಿಕರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು. ಈ ವೇಳೆ ಪೊಲೀಸರು ಬರುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದಾರೆ.