ಹುಬ್ಬಳ್ಳಿ: ‘ಮುಂದಿನ ಮಳೆಗಾಲದಲ್ಲಿ ಸ್ಥಳೀಯರು, ಉದ್ಯಮಿಗಳ ಸಹಕಾರದೊಂದಿಗೆ 30 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಅವಳಿ ನಗರಗಳ ಹಸಿರೀಕರಣ ಮಾಡುವ ಗುರಿ ಇದೆ’ ಎಂದು ಗ್ರೀನ್ ಕರ್ನಾಟಕ ಅಸೋಸಿಯೇಷನ್ ಅಧ್ಯಕ್ಷ ಚನ್ನು ಹೊಸಮನಿ ಹೇಳಿದರು.
ನಗರದ ತೋಳನಕೆರೆ ಉದ್ಯಾನದಲ್ಲಿ ನಡೆದ ‘ರನ್ ಫಾರ್ ನೇಚರ್ –2023’ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಗ್ರೀನ್ ಕರ್ನಾಟಕ ಅಸೋಸಿಯೇಷನ್, ವಸುಂಧರಾ ಫೌಂಡೇಷನ್, ವಿ ಕೇರ್ ಫೌಂಡೇಷನ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಜೂನ್ 4ರಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ವೃಕ್ಷಮಾತೆ ಸಾಲುಮರ ತಿಮ್ಮಕ್ಕ ಕಾರ್ಯಕ್ರಮ ಉದ್ಘಾಟಿಸಿದ್ದರು’ ಎಂದರು.
‘
ಈವರೆಗೆ 19 ಸಾವಿರ ಜನರಿಗೆ ಸಸಿಗಳನ್ನು ವಿತರಿಸಲಾಗಿದ್ದು, ವಿವಿಧ ಬಡಾವಣೆಗಳು, ಉದ್ಯಾನಗಳು, ಕೆರೆ ಡಂಡೆಗಳ ಮೇಲೆ ಆರು ಸಾವಿರ ಗಿಡಗಳನ್ನು ನೆಡಲಾಗಿದೆ’ ಎಂದು ತಿಳಿಸಿದರು.
‘
ಜೂನ್ ತಿಂಗಳಿಂದ ಈವರೆಗೆ ತೋಳನಕೆರೆ, ನೃಪತುಂಗ ಬೆಟ್ಟ, ಪಿರಾಮಿಡ್ ಧ್ಯಾನ ಮಂದಿರ, ಕೆಸಿಡಿ ಕಾಲೇಜು ವೃತ್ತ, ಉಣಕಲ್ ಉದ್ಯಾನ, ಜಿಮ್ಖಾನಾ ಕ್ಲಬ್ ಮೈದಾನ, ನುಗ್ಗಿಕೆರೆ ಹನುಮಂತ ದೇವಸ್ಥಾನ, ಇಂದಿರಾ ಗಾಜಿನ ಮನೆ, ಸಿದ್ಧಾರೂಡ ಮಠ ಹಾಗೂ ಶಾಲಾ ಕಾಲೇಜುಗಳಿಗೆ ಸಸಿಗಳನ್ನು ವಿತರಿಸಲಾಗಿದೆ’ ಎಂದರು.
‘
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಪ್ರಸ್ತಾವದ ಮೇರೆಗೆ ಕೋಲ್ ಇಂಡಿಯಾ ಕಂಪನಿಯ ಸಿಎಸ್ಆರ್ ನಿಧಿಯಡಿ 4 ಸಾವಿರ ಸಸಿಗಳನ್ನು ನೆಡಲಾಗಿದೆ. ಅಭಿಯಾನದಡಿ ಹಚ್ಚಿದ ಎನ್ನ ಸಸಿಗಳ ನಿರ್ವಹಣೆಯನ್ನೂ ಮಾಡಲಾಗುತ್ತಿದೆ’ ಎಂದು ಹೇಳಿದರು.
ಮೇಯರ್ ವೀಣಾ ಬರದ್ವಾಡ, ಉದ್ಯಮಿಗಳಾದ ವಿ.ಎಸ್.ವಿ.ಪ್ರಸಾದ್, ವೆಂಕಟೇಶ ಕಾಟವೆ, ರಮೇಶ ಪಾಟೀಲ, ವಿಶ್ವನಾಥ ಸೋಮಾಪುರ, ಪ್ರಕಾಶ ಬಾಫನಾ, ಗಿರೀಶ ನಾಲ್ವಡಿ, ಸುನೀಲ ಧಾರವಾಡಶೆಟ್ರ, ಪಾಲಿಕೆ ಸದಸ್ಯರಾದ ರಾಮಣ್ಣ ಬಡಿಗೇರ, ಶಿವು ಮೆಣಸಿನಕಾಯಿ, ಸ್ಮಾರ್ಟ್ ಸಿಟಿ ಸಂಸ್ಥೆಯ ಪರಿಸರ ಎಂಜಿನಿಯರ್ ಪನ್ನಗಾ, ವಸುಂಧರಾ ಫೌಂಡೇಷನ್ನ ಮೇಘರಾಜ ಕೆರೂರ, ವಿ.ಕೇರ್ ಫೌಂಡೇಷನ್ನ ಅಧ್ಯಕ್ಷ ಗಂಗಾಧರ ಗುಜಮಾಗಡಿ, ಜೀವನ ವಸ್ತ್ರದ, ವಿನಾಯಕ ನಾಯ್ಕರ ಇದ್ದರು.