ಶೀತ ವಾತಾವರಣದಲ್ಲಿ ಎಲ್ಲಾ ರೀತಿಯ ಆಹಾರಗಳು ದೇಹಕ್ಕೆ ಒಗ್ಗುವುದಿಲ್ಲ. ಜೊತೆಗೆ ಇವುಗಳು ದೇಹದಲ್ಲಿ ಇನ್ನಷ್ಟು ಸಮಸ್ಯೆ ಉಂಟು ಮಾಡಲು ಕಾರಣವಾಗಬಹುದು.
ಚಳಿಗಾಲದಲ್ಲಿ ಮೊಸರು ತಿನ್ನುವ ವಿಚಾರದಲ್ಲಿ ಒಂದಿಷ್ಟು ಗೊಂದಲಗಳಿರುವುದು ಸಹಜ. ಮೊಸರು, ಮಜ್ಜಿಗೆ ದೇಹವನ್ನು ತಂಪಾಗಿಸುವ ಗುಣ ಹೊಂದಿರುವುದರಿಂದ ಬಹಳಷ್ಟು ಜನ ಇದನ್ನು ತಿನ್ನುವುದು ಒಳ್ಳೆಯದಲ್ಲ ಎಂಬ ಭಾವನೆ ಹೊಂದಿದ್ದಾರೆ. ಆದರೆ ಕೆಲವು ಜೀರ್ಣಶಕ್ತಿ ವೃದ್ಧಿಸುವ ಜೊತೆಗೆ ಹಲವು ಕಾರಣಕ್ಕೆ ಪ್ರತಿದಿನ ಮೊಸರು ತಿನ್ನುವ ಅಭ್ಯಾಸ ಉತ್ತಮ ಎನ್ನುತ್ತಾರೆ. ಆದರೆ ಚಳಿಗಾಲದಲ್ಲಿ ಪ್ರತಿದಿನ ಮೊಸರು ತಿನ್ನುವುದು ಒಳ್ಳೆಯದೋ ಕೆಟ್ಟದ್ದೋ ಎಂಬ ಬಗ್ಗೆ ಹಲವರಿಗೆ ಇನ್ನೂ ಸ್ಪಷ್ಟ ಉತ್ತರ ದೊರಕಿರುವುದಿಲ್ಲ. ಹಾಗಾದರೆ ಚಳಿಗಾಲದಲ್ಲಿ ಪ್ರತಿದಿನ ಮೊಸರು ತಿನ್ನುವುದರಿಂದ ದೇಹದಲ್ಲಿ ಏನಾಗುತ್ತದೆ ಎಂಬುದನ್ನು ತಿಳಿಯಬೇಕು ಅಂದ್ರೆ ನೀವು ಈ ಸ್ಟೋರಿ ನೋಡಿ.
ಪೌಷ್ಟಿಕ ತಜ್ಞರಾದ ಕಿರಣ್ ಕುಕ್ರೇಜಾ ಅವರ ಪ್ರಕಾರ ಮೊಸರು ತಣ್ಣಗಿರುವುದು ನಿಜ. ಆದರೆ ಇದರಲ್ಲಿ ದೇಹ ಬೆಚ್ಚಗಿಡುವ ಒಂದಿಷ್ಟು ಅಂಶಗಳಿವೆ. ಇದು ದೇಹದ ಮೇಲೆ ಶಾಖದ ಪರಿಣಾಮ ಬೀರುವಂತೆ ಮಾಡುತ್ತದೆ ಎಂದು ಅವರು ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ. ʼಚಳಿಗಾಲದಲ್ಲಿ ಮೊಸರು ತಿನ್ನುವುದರಿಂದ ಇದು ದೇಹವನ್ನು ಬೆಚ್ಚಗಾಗಿಸುತ್ತದೆ. ಆ ಮೂಲಕ ಚಳಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಜೊತೆಗೆ ಇದರಲ್ಲಿ ಕರುಳಿನ ಆರೋಗ್ಯಕ್ಕೆ ಉತ್ತಮವಾದ ಪ್ರೋಬಯೋಟಿಕ್ ಅಂಶವು ಇದ್ದು, ಆರೋಗ್ಯ ಸುಧಾರಣೆಗೆ ನೆರವಾಗುತ್ತದೆʼ ಎಂದು ಅವರು ಬರೆದುಕೊಂಡಿದ್ದಾರೆ.
ಮೊಸರು ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ. ಜೊತೆಗೆ ದೇಹವು ಆಂತರಿಕವಾಗಿ ಶಾಖವನ್ನು ಉತ್ಪಾದಿಸಲು ಸಹಾಯ ಮಾಡುವ ಚಯಾಪಚಯವನ್ನು ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೇ ಮೊಸರಿನಲ್ಲಿರುವ ಪ್ರೊಬಯೋಟಿಕ್ ಅಂಶಗಳು ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಿ, ಕಾಲೋಚಿತ ಕಾಯಿಲೆಗಳ ವಿರುದ್ಧ ಅಂದರೆ ಆಯಾ ಋತುಮಾನದಲ್ಲಿ ಹರಡುವ ಕಾಯಿಲೆಗಳ ವಿರುದ್ಧ ಚೇತರಿಸಿಕೊಳ್ಳಲು ನಮಗೆ ಸಹಾಯ ಮಾಡುತ್ತದೆʼ ಎಂದು ಕುಕ್ರೇಜಾ ಬರೆದುಕೊಂಡಿದ್ದಾರೆ.