ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು (Mahesh Babu) ಮುಖ್ಯಭೂಮಿಕೆಯ ಗುಂಟೂರು ಖಾರಂ ಸಿನಿಮಾದ ಟಪ್ಪಾಂಗುಚ್ಚಿ ಹಾಡಿಗೆ ಕನ್ನಡತಿ ಶ್ರೀಲೀಲಾ (Sreeleela) ಹೆಜ್ಜೆ ಹಾಕಲಿದ್ದಾರೆ. ಅದೊಂದು ಡಾನ್ಸ್ ನಂಬರ್ ಸಾಂಗ್ ಆಗಿದ್ದು, ಶ್ರೀಲೀಲಾ ಮೈಚಳಿ ಬಿಟ್ಟು ಕುಣಿಯಲಿದ್ದಾರೆ. ಅಂದುಕೊಂಡಂತೆ ಆಗಿದ್ದರೆ, ಈ ಸಿನಿಮಾದಲ್ಲಿ ಇವರು ನಾಯಕಿಯಾಗಿ ನಟಿಸಬೇಕಿತ್ತು. ಆದರೆ, ಸಾಂಗ್ ವೊಂದಕ್ಕೆ ಹೆಜ್ಜೆ ಹಾಕಬೇಕಾಗಿದೆ.
ಗುಂಟೂರು ಖಾರಂ (Guntur Kharam) ಸಿನಿಮಾಗೆ ನಾಯಕಿ ಯಾರು ಎನ್ನುವ ಚರ್ಚೆ ಹಲವು ದಿನಗಳಿಂದ ನಡೆಯುತ್ತಲೇ ಇತ್ತು. ಪೂಜಾ ಹೆಗಡೆ (Pooja Hegde) ಬಿಟ್ಟು ಹೋದ ಸ್ಥಾನವನ್ನು ತುಂಬುವವರು ಯಾರು? ಎನ್ನುವ ಪ್ರಶ್ನೆ ಮೂಡಿತ್ತು. ಶ್ರೀಲೀಲಾ, ತ್ರಿಷಾ ಸೇರಿದಂತೆ ಹಲವರು ಹೆಸರು ನಾಯಕಿ ಸ್ಥಾನಕ್ಕಾಗಿ ಕೇಳಿ ಬಂದಿತ್ತು. ಈ ಎಲ್ಲ ಸ್ಟಾರ್ ನಟಿಯರಿಗೆ ಕೊಕ್ ನೀಡಿ, ಯುವ ನಟಿಗೆ ಮಣೆ ಹಾಕಿತ್ತು ಚಿತ್ರತಂಡ.
ಈ ಹಿಂದೆ ಕನ್ನಡದ ನಟಿ ಶ್ರೀಲೀಲಾ ಅಥವಾ ಸ್ಟಾರ್ ನಟಿ ತ್ರಿಷಾ ಈ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಲಿದ್ದಾರೆ ಎನ್ನುವ ಸುದ್ದಿಯಿತ್ತು. ಆದರೆ, ಯುವ ನಟಿ ಮೀನಾಕ್ಷಿ ಚೌಧರಿ (Meenakshi Chaudhary) ಎಂಟ್ರಿಯಾಗಿತ್ತು. ಕಿರುತೆರೆಯ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟವರು ಮೀನಾಕ್ಷಿ. ಆನಂತರ ಸಿನಿಮಾ ರಂಗವನ್ನು ಪ್ರವೇಶ ಮಾಡಿದವರು. ಹಿಟ್ : ದಿ ಸೆಕೆಂಡ್ ಕೇಸ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ.