ಬೇಲೂರು:- ಜಗತ್ತನ್ನು ಪ್ರೀತಿಸಿದ ಫಲವಾಗಿ ದೇವರು ಏಕೈಕ ತಮ್ಮ ಸ್ವಂತ ಮಗನನ್ನೆ ಧಾರೆ ಎರೆದರು. ಲೋಕಕಲ್ಯಾಣಕ್ಕಾಗಿ ಹಾತೊರೆಯುತಿದ್ದ ಏಸು ಸ್ವಾಮಿಯನ್ನು ಪ್ರಾರ್ಥಿಸಿದರೆ ನಮ್ಮ ಜೀವನ ಪಾವನವಾಗುತ್ತದೆ ಎಂದು ಅರೇಹಳ್ಳಿ ಸಂತಯೊವಾನ್ನರ ಕ್ರೈಸ್ತ ದೇವಾಲಯದ ಧರ್ಮಗುರು ಫಾ.ಕಿರಣ್ ಮೆಲ್ವಿನ್ ಹೇಳಿದರು.
ಬೇಲೂರು ತಾಲೂಕಿನ ಅರೇಹಳ್ಳಿಯ ಸಕಲೇಶಪುರ ರಸ್ತೆಯಲ್ಲಿರುವ ಸಂತ ಯೋವಾನ್ನರ ದೇವಾಲಯಲ್ಲಿ ಕ್ರಿಸ್ಮಸ್ ಅಂಗವಾಗಿ ಪ್ರಾರ್ಥನೆ ಸಲ್ಲಿಸಲು ಆಗಮಿಸಿದ ಭಕ್ತಾಧಿಗಳಿಗೆ ಪ್ರಬೋಧನೆ ನೀಡಿದ ಅವರು, ಜಗತ್ತಿನಲ್ಲಿದ್ದ ಕಂದಾಚಾರಗಳನ್ನು ಹೋಗಲಾಡಿಸಲು ಏಸು ತಮ್ಮ ಜೀವನವನ್ನೆ ಮುಡುಪಾಗಿಟ್ಟರು. ದೇವರ ಸಂದೇಶಗಳನ್ನು ಸಾರುವ ಪ್ರವಾದಿಯಾಗಿರುವ ಏಸು ಸ್ವಾಮಿಯ ಪವಾಡಗಳು
ಅವಿಸ್ಮರಣೀಯವಾದುವುಗಳಾಗಿವೆ ಎಂದರು.
ಕ್ರಿಸ್ಮಸ್ ಹಬ್ಬದ ಹಿನ್ನಲೆ ಸಂತ ಯೋವಾನ್ನರ ಕ್ರೈಸ್ತ ದೇವಾಲಯವನ್ನು ವಿದ್ಯುದ್ದೀಪಗಳಿಂದ ಶೃಂಗರಿಸಲಾಗಿತ್ತು. ಏಸುವಿನ ಜನ್ಮ ವೃತ್ತಾಂತವನ್ನು ಸಾರುವ ಸಾಂಪ್ರಾದಾಯಿಕ ಗೋಧಲಿಯನ್ನು ಚರ್ಚ್ ಎದುರು ನಿರ್ಮಾಣ ಮಾಡಲಾಗಿತ್ತು. ವಿವಿಧ ಬಣ್ಣದ ಬೆಳಕಿನಿಂದ ಕಂಗೊಳಿಸುತ್ತಾ ಆಕರ್ಷಣೀಯವಾಗಿದ್ದ ಗೋಧಲಿ ನಿರ್ಮಾಣಕ್ಕೆ ದೇವಾಲಯದ ಯುವಕರ ತಂಡ ಹಲವು ದಿನಗಳ ಕಾಲ ಶ್ರಮವಹಿಸಿತ್ತು.