ಬೆಂಗಳೂರು:- ಹಿಂದೂ-ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಕೆಲಸ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಯೋಜನೆಗಳಿಗೆ ಅಡಿಗಲ್ಲು ಹಾಕುವ ಬದಲು ಕನ್ನಡಿಗರ ತಲೆಯ ಮೇಲೆ ಕಲ್ಲು ಹಾಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದೂ-ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದರು.
ಏಳು ಕೋಟಿ ಕನ್ನಡಿಗರ ತಲೆ ಮೇಲೆ ಕಲ್ಲು ಹಾಕಿರುವ ಸರ್ಕಾರ, ಅಭಿವೃದ್ಧಿ ಕಾಮಗಾರಿಗೆ ಒಂದು ಅಡಿಗಲ್ಲನ್ನೂ ಹಾಕಿಲ್ಲ. ಜನರು ಸರ್ಕಾರದ ಬಗ್ಗೆ ಛೀ ಥೂ ಎಂದು ಮಾತನಾಡುತ್ತಿದ್ದಾರೆ. ಆದರೆ ಸರ್ಕಾರ ಹಿಂದೂ ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾತಿ, ಧರ್ಮಗಳ ನಡುವೆ ಬೆಂಕಿ ಹಚ್ಚುವ ವೀರನಾಗಿದ್ದಾರೆ ಎಂದರು.
ಬರ ಪರಿಹಾರಕ್ಕೆ ಇದೇ ವಾರದಲ್ಲಿ 2 ಸಾವಿರ ರೂ. ಬಿಡುಗಡೆ ಮಾಡಲಾಗುವುದು ಎಂದು ಸರ್ಕಾರ ಹೇಳಿದೆ. ಆದರೆ ಈವರೆಗೆ ಹಣ ಸಿಕ್ಕಿಲ್ಲ. ಶಾಲೆಯ ಶೌಚಾಲಯ ಸ್ವಚ್ಛಗೊಳಿಸಲು ಸರ್ಕಾರದ ಬಳಿ ಹಣವಿಲ್ಲ. 15-20 ಸಾವಿರ ರೂ.ಗೆ ಯಾರೂ ಬರದೆ ಶಾಲಾ ಮಕ್ಕಳ ಕೈಯಲ್ಲಿ ಶೌಚಾಲಯ ಸ್ವಚ್ಛಗೊಳಿಸಲಾಗುತ್ತಿದೆ. ಬೆಳಗಾವಿಯಲ್ಲಿ ಮಹಿಳೆಯನ್ನು ಬೆತ್ತಲುಗೊಳಿಸಿ ದೌರ್ಜನ್ಯ ಮಾಡಲಾಗಿದೆ. ಇವೆಲ್ಲಕ್ಕೂ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದರು.