ವಿಜಯಪುರ: ನನಗೆ ಮದ ಏರಿಲ್ಲ, ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ರೈತರು ಬರಗಾಲ ಬರಲಿ ಎಂದು ಆಶಿಸುತ್ತಾರೆ ಎಂಬ ತಮ್ಮ ಹೇಳಿಕೆ ಕುರಿತು ಸಕ್ಕರೆ ಸಚಿವ ಶಿವಾನಂದ್ ಪಾಟೀಲ್ (Shivanand Patil) ಸ್ಪಷ್ಟನೆ ನೀಡಿದ್ದಾರೆ.
ಈ ಸಂಬಂಧ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಲೋಕಸಭಾ ಚುನಾವಣೆ (Loksabha Election) ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿವೆ ಎಂದು ಹೇಳುವ ಮೂಲಕ ಸಚಿವರು ಪರೋಕ್ಷವಾಗಿ ತಮ್ಮ ಹೇಳಿಕೆ ಸಮರ್ಥಿಸಿಕೊಂಡರು. ನಾನು ರೈತರ ವಿರೋಧಿ ಅಲ್ಲ, ರೈತರ ವಿರೋಧವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಮೂರು ವರ್ಷಕ್ಕೊಮೆ ರೈತರ ಬೆಳೆಗಳಿಗೆ ಬೆಲೆ ಬರುತ್ತದೆ. ಉಳಿದ ಎರಡು ಬೆಲೆ ಇಲ್ಲದೆ ಕಂಗಾಲಾಗಿರುತ್ತಾರೆ. ಹಾಗಾಗಿ ರೈತರು ಸಾಲಮನ್ನಾ ಆಗಲಿ ಎಂದು ಆಶಯ ವ್ಯಕ್ತಪಡಿಸುತ್ತಾರೆ ಎಂದಿದ್ದೇನೆ ಅಂದರು.
ಇತ್ತೀಚೆಗೆ ಕೇಂದ್ರದ ಯೋಜನೆಗಳು ರೈತರಿಗೆ (Farmers) ಮುಳುವಾಗಿವೆ. ನನಗೆ ಮದ ಏರಿದೆ ಎಂದು ವಿರೋಧ ಪಕ್ಷದವರು ಹೇಳುತ್ತಾರೆ. ಆದರೆ ಇದೆಲ್ಲ ರಾಜಕೀಯ ಗಿಮಿಕ್ ಮಾಡುತ್ತಿದ್ದಾರೆ ಎಂದು ಸಚಿವರು ಆರೋಪಿಸಿದರು. ಅಲ್ಲದೆ ಬಿಜೆಪಿ ನಾಯಕರಿಗೆ ರೈತರ ಮೇಲೆ ಕರುಣೆ ಇದ್ದರೆ ಕೇಂದ್ರ ಸರ್ಕಾರದ ನೀತಿಗಳನ್ನು ಬದಲಾಯಿಸಲಿ. ವಿರೋಧ ಪಕ್ಷದ ನಾಯಕರು ರೈತರ ಸಮಸ್ಯೆ ಬಗ್ಗೆ ಪ್ರಧಾನಿ ಮೋದಿ ಗಮನಕ್ಕೆ ತರಲಿ ಎಂದು ಇದೇ ವೇಳೆ ಶಿವಾನಂದ್ ಪಾಟೀಲ್ ಒತ್ತಾಯಿಸಿದರು.