ಬೆಂಗಳೂರು: ಜಗತ್ತಿಗೆ ಶಾಂತಿ, ಪ್ರೀತಿಯ ಸಂದೇಶ ಸಾರಿದ ದೇವಪುತ್ರ ಯೇಸುವಿನ ಜನ್ಮದಿನದ ಆಚರಣೆಯೇ ಕ್ರಿಸ್ಮಸ್ (Christmas). ಮನುಷ್ಯ ಎಲ್ಲರಿಗೂ ಉಪಯುಕ್ತನಾಗಬೇಕು, ಎಲ್ಲರಲ್ಲಿಯೂ ಒಂದಾಗಿ ಬಾಳಬೇಕು ಮತ್ತು ಒಳ್ಳೆಯದನ್ನ ಕೇಳುವಂತವನಾಗಿರಬೇಕು ಎನ್ನುವುದೇ ಹಬ್ಬದ ಮುಖ್ಯ ಧ್ಯೇಯ.
ಪ್ರತಿ ವರ್ಷ ಡಿಸೆಂಬರ್ 25ರಂದು ದೇಶಾದ್ಯಂತ ಕ್ರೈಸ್ತ ಬಾಂಧವರು ಕ್ರಿಸ್ಮಸ್ ಹಬ್ಬವನ್ನು (Christmas Festival) ಆಚರಿಸುತ್ತಾರೆ. ವಿವಿಧ ಚರ್ಚ್ಗಳಲ್ಲಿ ಯೇಸುವಿಗೆ ವಿಶೇಷ ಪೂಜೆ ಸಲ್ಲಿಸುವ ಜೊತೆ ಭಾರೀ ಗಾತ್ರದ ಕೇಕ್ಗಳನ್ನು ಕತ್ತರಿಸುತ್ತಾರೆ. ಪ್ರಮುಖ ನಗರದ ಮಾಲ್ಗಳಲ್ಲಿಯೂ ವಿಶೇಷ ಕ್ರಿಸ್ಮಸ್ ದೀಪಾಲಂಕಾರ, ಕ್ರಿಸ್ಮಸ್ ಟ್ರೀ (Christmas Tree) ಸ್ಥಾಪಿಸಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುತ್ತಾರೆ
ಈ ಬಾರಿ ಏನು ವಿಶೇಷ?
ಈ ಬಾರಿಯ ಕ್ರಿಸ್ಮಸ್ ಹಬ್ಬಕ್ಕೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ದೇಶದಲ್ಲೇ ಅತಿದೊಡ್ಡ 100 ಅಡಿ ಎತ್ತರದ ಕ್ರಿಸ್ಮಸ್ ಟ್ರೀಯನ್ನು ಅನಾವರಣಗೊಳಿಸಲಾಗಿದೆ. ಇದರೊಂದಿಗೆ ನೀರು ಹಾಗೂ ಸಂಗೀತ ಕಾರಂಜಿಯನ್ನೂ ಆಯೋಜಿಸಲಾಗಿದೆ. ಇದರ ಪಕ್ಕದಲ್ಲೇ ಸಾಂತಾಕ್ರೂಸ್ ವೇಶದಲ್ಲಿರುವ ವ್ಯಕ್ತಿಗೆ ಕ್ರಿಸ್ಮಸ್ ವಿಶ್ ಮಾಡುವ ಮೂಲಕ ಜನರು ಸಂತಸ ಹಂಚಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಬೆಂಗಳೂರಿನ ವಿವಿಧೆಡೆ ಕೇಸ್ ಉತ್ಸವಗಳನ್ನೂ ಹಮ್ಮಿಕೊಳ್ಳಲಾಗಿದೆ.
ಹೊಸ ವರ್ಷಕ್ಕೆ ಕೆಲವೇ ದಿನಗಳ ಮುನ್ನ ಬರುವ ಈ ಹಬ್ಬದಲ್ಲಿ ಸ್ಥಳೀಯರು ಹಾಗೂ ಯುವಸಮೂಹದ ಸಂಭ್ರಮಕ್ಕೆ ಪಾರವೇ ಇರುವುದಿಲ್ಲ. ಕೋವಿಡ್ ಮೊದಲ ಅಲೆ ಅಪ್ಪಳಿಸಿದಾಗ, ಕರೋಲ್ ಸಂಗೀತ ಕಛೇರಿಗಳಿಗೂ ಬ್ರೇಕ್ ಹಾಕಲಾಗಿತ್ತು. ಸೀಮಿತ ಪೂಜೆ ಪ್ರಾರ್ಥನೆಗಳಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ಆದ್ರೆ ಕಳೆದ 2 ವರ್ಷಗಳಿಂದ ಅದ್ಧೂರಿಯಾಗಿ ಈ ಉತ್ಸವಗಳು ಸಾಗುತ್ತಿವೆ