ಬೆಂಗಳೂರು:- ವೃದ್ಧೆಯೊಬ್ಬರಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಕ್ಲೈನ್ ವೆಂಕಟೇಶ್ ಪುತ್ರನನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ರಾಕ್ಲೈನ್ ವೆಂಕಟೇಶ್ ಪುತ್ರ ಅಭಿಲಾಷ್ ವೆಂಕಟೇಶ್ ಮೇಲೆ ಈ ಆರೋಪ ಬಂದಿದ್ದು, ಈ ಪ್ರಕರಣದ ಬಂಧಿತ ಆರೋಪಿಗಳಿಂದ ವೆಂಕಟೇಶ್ ಪುತ್ರನ ಮಾಲೀಕತ್ವದ ಕಂಪನಿಯ ಬ್ಯಾಂಕ್ ಖಾತೆಗೆ ೧.೨ ಕೋಟಿ ರೂ.ವರ್ಗಾವಣೆಯಾಗಿತ್ತು. ಈ ಹಿನ್ನೆಲೆಯಲ್ಲಿ ವೆಂಕಟೇಶ್ ಅವರ ಪುತ್ರ ಅಭಿಲಾಷ್ಗೆ ಸಂಕಷ್ಟ ಎದುರಾಗಿದೆ.
ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ತನಿಖಾಧಿಕಾರಿ ಮುಂದೆ ಅಭಿಲಾಷ್ ವೆಂಕಟೇಶ್ ಹಾಜರಾಗಿದ್ದರು. ಕೆಲ ಹೊತ್ತು ಅಭಿಲಾಷ್ ಅವರನ್ನು ತೀವ್ರ ವಿಚಾರಣೆ ನಡೆಸಿದ ಅಧಿಕಾರಿಗಳು ಅವರ ಹೇಳಿಕೆ ದಾಖಲಿಸಿದ್ದಾರೆ. ಈ ವೇಳೆ ನಾನು ತಪ್ಪು ಮಾಡಿಲ್ಲ. ಮೋಸದ ಬಗ್ಗೆ ತಿಳಿಯದೆ ಹಣ ಪಡೆದಿದ್ದೆ ಎಂದು ಅಭಿಲಾಷ್ ಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೆ ಅಗತ್ಯವಿದ್ದರೆ ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಿ ಅಭಿಲಾಷ್ ಅವರನ್ನು ಸಿಸಿಬಿ ಅಧಿಕಾರಿಗಳು ಕಳುಹಿಸಿದ್ದಾರೆ.
ಇನ್ನೂ ೨೫ ಲಕ್ಷ ಕಮಿಷನ್ ಕೊಟ್ಟಿದ್ದ ಅಭಿಲಾಷ್:
ಜೆ.ಪಿ.ನಗರ ೬ನೇ ಹಂತದಲ್ಲಿ ೧೩೫೦ ಚದರಡಿ ವಿಸ್ತೀರ್ಣದ ನಿವೇಶನದಲ್ಲಿ ಡ್ಯೂಪ್ಲೆಕ್ಸ್ ಮನೆ ಕಟ್ಟಿಸಿಕೊಂಡು ಒಂಟಿಯಾಗಿ ಅಂಬುಜಾಕ್ಷಿ ನೆಲೆಸಿದ್ದಾರೆ. ತಮ್ಮ ಮನೆಯನ್ನು ಮಾರಾಟ ಮಾಡಿ ವಿದೇಶದಲ್ಲಿರುವ ಮಗನೊಂದಿಗೆ ನೆಲೆಸಲು ಅವರು ಯೋಜಿಸಿದ್ದರು. ಈ ಮನೆ ಮಾರಾಟ ಸಂಗತಿ ತಿಳಿದು ಅಂಬುಜಾಕ್ಷಿ ಅವರಿಗೆ ಆರೋಪಿಗಳು ವಂಚಿಸಿದ್ದರು. ಈ ಬಗ್ಗೆ ಮಹಿಳೆ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಸಿಸಿಬಿ, ವಂಚನೆ ಜಾಲದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.