ಗೃಹ ಖರೀದಿಗೆ ಸಾಲ ನೀಡುವ ಖಾಸಗಿ ಬ್ಯಾಂಕ್ಗಳು, ಸಂಬಳ ಪಡೆಯುವವರ ಸಾಲಗಳ ಮೇಲೆ ಶೇ. 9.25 ಬಡ್ಡಿ ವಿಧಿಸಿದೆ. ಅದೇ ಬ್ಯಾಂಕ್ಗಳು ಸ್ವಂತ ಉದ್ಯೋಗಿಗಳಿಗೆ ಅಷ್ಟೇ ಮೊತ್ತದ ಸಾಲಕ್ಕೆ ಶೇ. 9.40ರಷ್ಟು ಹೆಚ್ಚಿನ ಬಡ್ಡಿ ವಿಧಿಸಿದೆ.
ಬ್ಯಾಂಕ್ಗಳು ಉದ್ಯೋಗದಾತರಿಗೆ ಅಂದರೆ ಸಂಬಳ ಪಡೆಯುವವರಿಗೆ ಹಾಗೂ ಸ್ವಂತ ಉದ್ಯೋಗ ಮಾಡುವವರಿಗೆ ಈ ತಾರತಮ್ಯ ಮಾಡಲು ಕೆಲವು ಕಾರಣಗಳಿವೆ. ಅವು ಯಾವುವೆಂದರೆ, ಸಾಮಾನ್ಯವಾಗಿ ಸಾಲ ಒದಗಿಸುವ ಬ್ಯಾಂಕ್ಗಳು ಅದರಿಂದ ಬರುವ ಬಡ್ಡಿ ದರವನ್ನೇ ಅವಲಂಬಿಸಿವೆ. ಸಾಲಗಾರ ಬಡ್ಡಿ ಕಟ್ಟುವುದರಲ್ಲಿ ಏನಾದರೂ ಹೆಚ್ಚು ಕಡಿಮೆ ಮಾಡಿದರೆ ಬ್ಯಾಂಕ್ಗಳ ಬಡ್ಡಿ ಅಂದರೆ ಆದಾಯ ಖೋತವಾಗುತ್ತದೆ. ಹೀಗಾಗದಂತೆ ತಡೆಯುವುದೇ ಬ್ಯಾಂಕ್ಗಳ ಮಹಾನ್ ಧ್ಯೇಯ. ಇದಕ್ಕಾಗಿ ಉದ್ಯೋಗ ಭದ್ರತೆ ಇರುವ ವೇತನದಾರರನ್ನು ಬ್ಯಾಂಕ್ಗಳು ಹೆಚ್ಚು ನೆಚ್ಚಿಕೊಳ್ಳುತ್ತವೆ ಮತ್ತು ಅಂತಹವರನ್ನು ಕರೆದು ಸಾಲ ಕೊಡುತ್ತವೆ.
ವೇತನದಾರರಿಗೆ ನಿಗದಿತ ಆದಾಯವಿರುತ್ತದೆ. ಆದರೆ ಸ್ವಂತ ಉದ್ಯೋಗಿಗಳಲ್ಲಿ ಆದಾಯ ಏರಿಳಿತವಾಗುತ್ತಿರುತ್ತದೆ. ಈ ಕಾರಣ ಬ್ಯಾಂಕ್ಗಳು ಸಾಲ ನೀಡುವ ವಿಷಯದಲ್ಲಿ ವೇತನದಾರರಿಗೆ ಮಣೆ ಹಾಕುತ್ತವೆ.
ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಇರುವ ಸಿಬಿಲ್ ಟ್ರಾನ್ಸ್ ಯೂನಿಯನ್ ಪ್ರಕಾರ, ಉದ್ದೇಶಪೂರ್ವಕವಾಗಿ ಬ್ಯಾಂಕ್ಗೆ ಬಡ್ಡಿ ಕಟ್ಟದಿರುವ ಪ್ರಕರಣಗಳ ಅಂದಾಜು ಮೊತ್ತ 50 ಸಾವಿರ ಕೋಟಿ ರೂ.ಗಳಷ್ಟಿದೆಯಂತೆ. ಮಾರ್ಚ್ 2022ರಲ್ಲಿ ಒಟ್ಟು 14,899 ಖಾತೆಗಳಿಂದ 3,04,063 ಕೋಟಿ ರೂ. ಬಾಕಿ ಇದ್ದು, 2023ರ ಮಾರ್ಚ್ಗೆ ಹೀಗೆ ಬಡ್ಡಿ ಕಟ್ಟದಿರುವ ಖಾತೆಗಳ ಸಂಖ್ಯೆ 16,883ರಷ್ಟಿತ್ತು ಎನ್ನಲಾಗಿದೆ. ಹೀಗೆ ಆರು ತಿಂಗಳಿಗಿಂತ ಹೆಚ್ಚು ಅವಧಿಗೆ ಸಾಲ ಅಥವಾ ಬಡ್ಡಿ ಕಟ್ಟದಿದ್ದರೆ ಅಂತಹ ಖಾತೆ ಆಥವಾ ಖಾತೆದಾರರನ್ನು ಸುಸ್ತಿದಾರರು ಎಂದೇ ಪರಿಗಣಿಸಲಾಗುತ್ತದೆ. ಹೀಗೆ ಬಡ್ಡಿಯನ್ನು ನಿರಂತರವಾಗಿ ಕಟ್ಟಲು ಹಿಂಜರಿಯುವವರಲ್ಲಿ ಸ್ವಂತ ಉದ್ಯೋಗಿಗಳೇ ಹೆಚ್ಚು ಎನ್ನುತ್ತದೆ ಸಿಬಿಲ್ ವರದಿ.