ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 (Covid-19) ಪ್ರಕರಣಗಳು ಮತ್ತೆ ಹೆಚ್ಚುತ್ತಿವೆ. ಇಂದು (ಭಾನುವಾರ) ಒಂದೇ ದಿನ 104 ಪಾಸಿಟಿವ್ ಕೇಸ್ ವರದಿಯಾಗಿವೆ. ಯಾವುದೇ ಸಾವು ಪ್ರಕರಣ ವರದಿಯಾಗಿಲ್ಲ.
ಶನಿವಾರ 8 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 271 ಕ್ಕೆ ಏರಿಕೆ ಕಂಡಿದೆ. ಕೊರೊನಾ ಪಾಸಿಟಿವಿಟಿ ದರ 5.93% ಇದೆ.
ಸಿಲಿಕಾನ್ ಸಿಟಿ ಬೆಂಗಳೂರು ಕೊರೊನಾ ಹಾಟ್ಸ್ಪಾಟ್ ಆಗುತ್ತಿದೆ. ನಗರದಲ್ಲಿ ಕೋವಿಡ್ ಪ್ರಕರಣ ದಿನೇ ದಿನೇ ಏರಿಕೆ ಕಂಡಿದ್ದು, ಭೀತಿ ಮೂಡಿಸಿದೆ. ಇಂದು ಬೆಂಗಳೂರಿನಲ್ಲಿ 85 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಉಳಿದಂತೆ ಚಾಮರಾಜನಗರ ಜಿಲ್ಲೆಯಲ್ಲಿ 2, ದಕ್ಷಿಣ ಕನ್ನಡದಲ್ಲಿ 1, ಮಂಡ್ಯ 1, ಮೈಸೂರು 7, ಶಿವಮೊಗ್ಗ 6, ತುಮಕೂರಿನಲ್ಲಿ 2 ಪ್ರಕರಣಗಳು ದೃಢಪಟ್ಟಿವೆ.
ಪ್ರವಾಸಕ್ಕೆಂದು ಸಿಂಗಾಪುರಕ್ಕೆ ತೆರಳಿದ್ದ ಮಂಡ್ಯ ಮೂಲದ ವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ. ಸಿಂಗಾಪುರ ಪ್ರವಾಸ ಮುಗಿಸಿ ಕಳೆದ ಮೂರು ದಿನಗಳ ಹಿಂದೆ ಮಂಡ್ಯಗೆ ವ್ಯಕ್ತಿ ವಾಪಸಾಗಿದ್ದ. ಆತನಿಗೆ ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ತೆರಳಿ ವ್ಯಕ್ತಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದ. ಇದೀಗ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ದೃಢಪಟ್ಟಿದೆ.