ಬೆಂಗಳೂರು:- ಮುಸ್ಲಿಮರ ಅತಿಯಾದ ತುಷ್ಟೀಕರಣಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಚ್ಚರ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಅತಿಯಾದ ತುಷ್ಟೀಕರಣ ಮಾಡಿದ್ದರಿಂದಲೇ 2018ರ ವಿಧಾನಸಭೆ ಚುನಾವಣೆಯಲ್ಲಿ ನೀವು ಸೋತಿದ್ದೀರಿ ಎಂಬುದನ್ನು ಮರೆಯಬಾರದು. ಈಗಲೂ ಅದು ಮುಂದುವರೆದರೆ ಜನ ಪಾಠ ಕಲಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಎಚ್ಚರಿಸಿದ್ದಾರೆ.
ಅಷ್ಟಕ್ಕೂ ಕರ್ನಾಟಕದಲ್ಲಿ ಹಿಜಾಬ್ನ್ನು ಯಾರು ನಿಷೇಧ ಮಾಡಿದ್ದಾರೆ? ನಾನು ಆದೇಶವನ್ನು ವಾಪಸ್ ಪಡೆಯುತ್ತೇನೆಂದು ಹೇಳಿದ್ದೀರಿ. ನಿಮಗೆ ಕಾನೂನಿನ ಅರಿವು ಇದೆಯೇ ಎಂದು ಪ್ರಶ್ನಿಸಿದರು. ಶಾಲಾಕಾಲೇಜಿನ ಕೊಠಡಿಗಳಲ್ಲಿ ಮಾತ್ರ ಹಿಜಾಬ್ ಧರಿಸಬಾರದೆಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿತು ಯಾರು ಎಲ್ಲಿ ಬೇಕಾದರೂ ತಮಗೆ ಇಷ್ಟವಾದ ಉಡುಗೆ ತೊಡುಗೆಗಳನ್ನು ಧರಿಸಲು ಅವಕಾಶವಿದೆ.
ಶಾಲಾಕಾಲೇಜುಗಳಲ್ಲಿ ಎಲ್ಲರೂ ಸಮಾನತೆ ಬರಲಿ ಎಂಬ ಕಾರಣಕ್ಕಾಗಿಯೇ ಸಂಹಿತೆಯನ್ನು ಜಾರಿಮಾಡಲಾಗಿದೆ. ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸಬಾರದೆಂದು ಬಿಜೆಪಿ ಸರ್ಕಾರ ಆದೇಶ ಹೊರಡಿಸಿತ್ತೆ? ಎಂದು ಪ್ರಶ್ನಿಸಿದರು. ಸರ್ಕಾರದ ಆದೇಶವನ್ನು ಹೈಕೋರ್ಟ್ ಕೂಡ ಎತ್ತಿ ಹಿಡಿದಿದೆ.
ಸುಪ್ರೀಂಕೋರ್ಟ್ನಲ್ಲಿ ವಿಚಾರಣಾ ಹಂತದಲ್ಲಿರುವಾಗ ಇಷ್ಟು ಆತುರವಾಗಿ ಹಿಜಾಬ್ ಬಗ್ಗೆ ಹೇಳಿಕೆ ಕೊಡುವ ಅಗತ್ಯವೇನಿತು? ನೀವು ಪ್ರತಿಯೊಂದನ್ನು ಬಣ್ಣದ ಮೂಲಕವೇ ಗುರುತಿಸಿಕೊಳ್ಳಲು ಹೊರಟಿದ್ದೀರಿ, ಇದಕ್ಕೆ ಜನತೆ ಕೂಡ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ಕೊಟ್ಟರು. ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಹಾಕಿಕೊಂಡು ಬಂದರೆ ನಾಳೆ ಇನ್ಯಾರೊ ಕೇಸರಿ ಶಾಲು, ಉಳಿದವರು ಟೋಪಿ ಹಾಕಿಕೊಂಡು ಬರುತ್ತಾರೆ.
ಪೊಲೀಸ್ ಇಲ್ಲವೇ ಮಿಲ್ಟ್ರಿ ಪೆರೇಡ್ನಲ್ಲಿ ಹಿಜಾಬ್ ಹಾಕುತ್ತೇವೆ ಎಂದರೆ ನಾವೇನು ಮಾಡಲು ಸಾಧ್ಯ ಎಂದು ಪ್ರಶ್ನೆ ಮಾಡಿದರು. ಸಿದ್ದರಾಮಯ್ಯನವರೇನೂ ಮೂರ್ಖರಲ್ಲ. ಇದನ್ನು ಉದ್ದೇಶ ಪೂರ್ವಕವಾಗಿಯೇ ಹೇಳಿದ್ದಾರೆ. ಅವರಿಗೆ ಇದರ ಅರಿವಿಲ್ಲ ಎಂದು ಯಾರು ಭಾವಿಸಬಾರದು. ಜನತೆ ಕಾದು ನೋಡಿ ಉತ್ತರ ಕೊಡುತ್ತಾರೆ ಎಂದು ತಿಳಿಸಿದರು.