ಟಾಸ್ಕ್ ನಲ್ಲಿ ಗಾಯಗಳಾಗೋದು ಸಹಜ. ಎಷ್ಟೋ ಬಾರಿ ವಿಪರೀತ ಏಟು ಮಾಡಿಕೊಂಡು ಬಿಗ್ ಬಾಸ್ (Bigg Boss Kannada) ಮನೆಯಿಂದ ಆಚೆ ಬಂದವರು ಇದ್ದಾರೆ. ಈ ಸೀಸನ್ ನಲ್ಲಿ ತನಿಷಾ ಏಟು ಮಾಡಿಕೊಂಡು ಆಸ್ಪತ್ರೆ ಪಾಲಾಗಿದ್ದರು. ಹುಷಾರಾಗಿ ಮತ್ತೆ ಮನೆ ಪ್ರವೇಶ ಮಾಡಿದರು. ಮೊನ್ನೆ ಮೊನ್ನೆಯಷ್ಟೇ ಪ್ರತಾಪ್ ಮತ್ತು ಸಂಗೀತಾ ಕೂಡ ಕಣ್ಣಿಗೆ ಕೆಮಿಕಲ್ ನೀರು ಹಾಕಿಸಿಕೊಂಡು ಆಸ್ಪತ್ರೆ ಸೇರಿಕೊಂಡಿದ್ದರು. ನಿನ್ನೆ ನಡೆದ ಟಾಸ್ಕ್ ನಲ್ಲಿ ವಿನಯ್ ಮತ್ತು ಕಾರ್ತಿಕ್ ಇಬ್ಬರೂ ಗಾಯಗೊಂಡಿದ್ದಾರೆ. ಅದರಲ್ಲೂ ವಿನಯ್ ಬೆರಳಿಗೆ ಬಲವಾಗಿಯೇ ಏಟು ಬಿದ್ದಿದೆ.
ಟಾಸ್ಕ್ ನಲ್ಲಿ ವಿನಯ್ (Vinay) ಗೌಡ ಸಿಕ್ಕಾಪಟ್ಟೆ ಅಗ್ರೆಸಿವ್ ಆಗಿ ಆಡುತ್ತಾರೆ. ಅವರನ್ನು ಕಂಟ್ರೋಲ್ ಮಾಡೋದು ತುಂಬಾ ಕಷ್ಟ. ಕುಸ್ತಿ ಪಟುವಿನಂತೆ ಸದಾ ಮುಸಿಮುಸಿ ಅನ್ನುತ್ತಲೇ ಇರುತ್ತಾರೆ. ನಿನ್ನೆ ನಡೆದ ಕಲೆ ಒಳ್ಳೆಯದಲ್ಲ ಟಾಸ್ಕ್ ನಲ್ಲೂ ಅವರು ಸಖತ್ ಅಗ್ರೆಸಿವ್ ಆಗಿಯೇ ಆಟವಾಡಿದರು. ಪರಿಣಾಮ ಬೆರಳಿಗೆ ಏಟು ಮಾಡಿಕೊಂಡರು. ಅದಕ್ಕಾಗಿ ಅವರು ಆ ಟಾಸ್ಕ್ ನಿಂದಲೇ ಹೊರ ಬರಬೇಕಾಯಿತು. ಬೆರಳಿಗೆ ತೀವ್ರ ತರಹದ ಗಾಯವಾಗಿದ್ದರಿಂದ ಟಾಸ್ಕ್ ನಲ್ಲಿ ಭಾಗಿ ಆಗದಂತೆ ವೈದ್ಯರು ಸಲಹೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಟಾಸ್ಕ್ ನಲ್ಲಿ ಭಾಗಿಯಾಗಬೇಡಿ ಎಂದು ಬಿಗ್ ಬಾಸ್ ಕೂಡ ಅನೌನ್ಸ್ ಮಾಡಿದ್ದಾರೆ.
ಅಗ್ರೆಸಿವ್ ಕಾರಣದಿಂದಾಗಿಯೇ ಈ ಹಿಂದೆಯೂ ಆಟ ರದ್ದಾದ ಉದಾಹರಣೆ ಇದೆ. ಅದು ವಿನಯ್ ಕಾರಣದಿಂದಾಗಿಯೇ ಟಾಸ್ಕ್ ರದ್ದಾಗಿದೆ. ಹಾಗಾಗಿ ವಿನಯ್ ಆಡುವಾಗ ಪದೇ ಪದೇ ತುಕಾಲಿ ಸಂತು, ಅದನ್ನು ನೆನಪಿಸುತ್ತಲೇ ಇದ್ದರು. ತುಕಾಲಿ ಏನೇ ಹೇಳಿದರೂ, ಅವರ ಮಾತನ್ನು ಕೇಳಲಿಲ್ಲ ವಿನಯ್. ಹಾಗಾಗಿ ಬೆರಳಿಗೆ ಏಟು ಮಾಡಿಕೊಳ್ಳುವಂತಹ ಪ್ರಸಂಗ ಎದುರಾಯಿತು. ಅದರಲ್ಲೂ ವಿನಯ್, ಕಾರ್ತಿಕ್ ಮತ್ತು ಅವಿನಾಶ್ ಶೆಟ್ಟಿ ನಡುವಿನ ಗಲಾಟೆ ತಾರಕಕ್ಕೇರಿತ್ತು. ಮೂವರು ಪರಸ್ಪರ ಕಿತ್ತಾಡಿಕೊಂಡ ಪರಿಣಾಮ ಕಾರ್ತಿಕ್ ಅವರಿಗೆ ಬೆನ್ನಿಗೆ ಏಟಾಗಿದೆ. ಅವರು ಕೂಡ ಆರೈಕೆಯಲ್ಲಿದ್ದಾರೆ.