ಬೆಂಗಳೂರು: ಯಶವಂತಪುರದ ಅಂದ್ರಹಳ್ಳಿ ಸರ್ಕಾರಿ ಶಾಲೆಯಲ್ಲಿ (Andrahalli School) ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಮುಖ್ಯಶಿಕ್ಷಕಿಯನ್ನ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
BEO ಆಂಜಿನಪ್ಪ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಶಾಲೆಯ ಮುಖ್ಯಶಿಕ್ಷಕಿ ಲಕ್ಷ್ಮಿದೇವಮ್ಮರನ್ನ ಬಂಧಿಸಿದ್ದಾರೆ.
ತಡರಾತ್ರಿಯಿಂದಲೇ ಅವರನ್ನ ರಾಜ್ಯ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದ್ದು, ಶನಿವಾರ (ಇಂದು) ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಡೆದಿದ್ದೇನು..?:
ಕೋಲಾರ ಜಿಲ್ಲೆಯಲ್ಲಿ ಶೌಚಗುಂಡಿಗೆ ಮಕ್ಕಳನ್ನ ಇಳಿಸಿದ ಪ್ರಕರಣ ಮಾಸುವ ಬೆನ್ನೆಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿತ್ತು. ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಸರ್ಕಾರಿ ಶಾಲೆಯಲ್ಲಿ ಮತ್ತೊಂದು ಘಟನೆ ನಡೆದಿದೆ. ಯಶವಂತಪುರ ವಿಧಾನಸಭಾ ಕ್ಷೇತ್ರದ ಅಂದ್ರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕೈಯಿಂದ ಟಾಯ್ಲೆಟ್ ಕ್ಲೀನಿಂಗ್ (Toilet Clean) ಮಾಡಿಸಿದ್ದರು. 6 ನೇ ತರಗತಿ ವಿದ್ಯಾರ್ಥಿಗಳು ಆಸಿಡ್ ಹಾಕಿ ಶೌಚಾಲಯ ಕ್ಲೀನ್ ಮಾಡಿದ್ದರು. ಈ ವಿಚಾರ ಪೋಷಕರಿಗೆ ಗೊತ್ತಾಗಿ ಅವರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ್ದರು.
ಸದ್ಯ ಪ್ರಕರಣ ಸಂಬಂಧ ಶಾಲೆಯ ಹಿರಿಯ ಮುಖ್ಯ ಶಿಕ್ಷಕಿ ಲಕ್ಷ್ಮಿದೇವಮ್ಮ ಅವರನ್ನ ಶಿಕ್ಷಣ ಇಲಾಖೆ ಶುಕ್ರವಾರ ಅಮಾನತು ಮಾಡಿತ್ತು. ಬಿಇಓ ವರದಿ ಆಧರಿಸಿ ಪ್ರಕರಣದಲ್ಲಿ ಶಿಕ್ಷಕಿ ಲಕ್ಷ್ಮಿದೇವಮ್ಮ ಅವರ ತಪ್ಪು ಕಂಡು ಬಂದ ಹಿನ್ನಲೆಯಲ್ಲಿ ಬೆಂಗಳೂರು ಉತ್ತರ ಜಿಲ್ಲೆ ಡಿಡಿಪಿಐ ಲೋಕೇಶ್ವರ ರೆಡ್ಡಿ ಅಮಾನತು ಮಾಡಿ ಅದೇಶ ಹೊರಡಿಸಿದ್ದರು. ಬಳಿಕ ಬಿಇಒ ನೀಡಿದ ದೂರಿನ ಮೇರೆಗೆ ಬಂಧಿಸಲಾಗಿದೆ.