ಪರ್ಲ್: ಸಂಜು ಸ್ಯಾಮ್ಸನ್ ಅವರ ಚೊಚ್ಚಲ ಶತಕ ಹಾಗೂ ಅರ್ಷ್ದೀಪ್ ಸಿಂಗ್ ಶಿಸ್ತುಬದ್ಧ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 78 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಮುಡಿಗೇರಿಸಿಕೊಂಡಿದೆ. ಈ ಸರಣಿ ಗೆಲುವು ಕೆ.ಎಲ್ ರಾಹುಲ್ ನಾಯಕತ್ವಕ್ಕೆ ಮತ್ತಷ್ಟು ಬಲ ನೀಡಿದೆ.
ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಬಳಿಕ ದಕ್ಷಿಣ ಆಫ್ರಿಕಾದಲ್ಲಿ ಹರಿಣರ ವಿರುದ್ಧ ಸರಣಿ ಗೆದ್ದ ಟೀಂ ಇಂಡಿಯಾದ 2ನೇ ನಾಯಕ ಎಂಬ ಖ್ಯಾತಿಯನ್ನೂ ರಾಹುಲ್ ಗಳಿಸಿದ್ದಾರೆ. ಇದರೊಂದಿಗೆ ಲೆಜೆಂಡ್ ಎಂ.ಎಸ್ ಧೋನಿ ಅವರ ಟ್ರೆಂಡನ್ನೇ ಮುಂದುವರಿಸಿ ಅಭಿಮಾನಿಗಳ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಗಣ್ಯರಿಂದ ಸರಣಿ ಟ್ರೋಫಿ ಪಡೆಯುತ್ತಿದ್ದಂತೆ ಅದನ್ನು ಸಹ ಆಟಗಾರ ರಿಂಕು ಸಿಂಗ್ಗೆ ನೀಡಿದ್ದಾರೆ. ಗ್ರೂಪ್ ಫೋಟೋ ತೆಗೆಸಿಕೊಳ್ಳುವಾಗಲು ಕೆ.ಎಲ್ ರಾಹುಲ್ ಕೊನೆಯಲ್ಲಿ ನಿಂತು ಸಹ ಆಟಗಾರರೊಂದಿಗೆ ಸಂಭ್ರಮಿಸಿದ್ದಾರೆ. ಇದು ಧೋನಿ ಅಭಿಮಾನಿಗಳಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ.
ಪರ್ಲ್ನ ಬೋಲೆಂಡ್ ಪಾರ್ಕ್ನಲ್ಲಿ ನಡೆದ ಏಕದಿನ ಸರಣಿಯ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ನೀಡಿದ್ದ 297 ರನ್ಗಳ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ಉತ್ತಮ ಆರಂಭ ಪಡೆದುಕೊಂಡಿತ್ತಾದರೂ ಬಳಿಕ ಭಾರತದ ಸಂಘಟಿತ ಬೌಲಿಂಗ್ ದಾಳಿ ಎದುರಿಸುವಲ್ಲಿ ವಿಫಲವಾಯಿತು. ಅಂತಿಮವಾಗಿ 45.5 ಓವರ್ಗಳಲ್ಲಿ 218 ರನ್ಗಳಿಗೆ ಆಲೌಟ್ ಆಯಿತು. ಇದರಿಂದ ಭಾರತ 78 ರನ್ಗಳ ಭರ್ಜರಿ ಜಯ ಸಾಧಿಸಿ, ಸರಣಿ ಕೈವಶ ಮಾಡಿಕೊಂಡಿತು.