ಹುಬ್ಬಳ್ಳಿ: ಗುತ್ತಿಗೆ ಕಾರ್ಮಿಕರಿಗೆ ಸೇವಾ ಭದ್ರತೆ ನೀಡಬೇಕು, ಬಂಡವಾಳಶಾಹಿಗಳ ಪರ ಹಾಗೂ ಕಾರ್ಮಿಕ ವಿರೋಧಿ ಲೇಬರ್ ಕೋಡ್ ರದ್ದು ಮಾಡುವುದು ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನಡೆಯುತ್ತಿರುವ ಅಖಿಲ ಭಾರತ ಪ್ರತಿಭಟನಾ ಸಪ್ತಾಹದ ಅಂಗವಾಗಿ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಎಐಯುಟಿಯುಸಿ ಕೇಂದ್ರ ಕಾರ್ಮಿಕ ಸಂಘಟನೆ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗಂಗಾಧರ ಬಡಿಗೇರ ಮಾತನಾಡಿ, ಕೇಂದ್ರ, ರಾಜ್ಯ ಸರ್ಕಾರಗಳು ಕಾರ್ಪೋರೇಟ್ ಕಂಪನಿಗಳ ಪರ ನೀತಿಗಳನ್ನು ರೂಪಿಸುತ್ತಿರುವುದರಿಂದ ದುಡಿಯುವ ಜನರ ಶೋಷಣೆಯಾಗುತ್ತಿದೆ. ಕೆಲಸದ ಅವಧಿಯನ್ನು 12 ಗಂಟೆಗಳಿಗೆ ಹೆಚ್ಚಳ ಮಾಡಲಾಗಿದೆ. ಹಳೇ ಪಿಂಚಣಿ ಯೋಜನೆಯನ್ನೇ ಪುನರ್ ಜಾರಿಗೊಳಿಸಬೇಕೆಂಬ ಬೇಡಿಕೆಯನ್ನು ಕಡೆಗಣಿಸಲಾಗುತ್ತಿದೆ ಎಂದು ದೂರಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಎಐಯುಟಿಯುಸಿ ಜಿಲ್ಲಾ ಘಟಕದ ಉಪಾಧ್ಯಕ್ಷೆ ಭುವನಾ ಬಳ್ಳಾರಿ, ಲಕ್ಷಾಂತರ ಮಹಿಳೆಯರೇ ಇರುವ ವಿವಿಧ ಯೋಜನೆಗಳಲ್ಲಿ ತೊಡಗಿರುವ ಆಶಾ, ಅಂಗನವಾಡಿ, ಬಿಸಿಯೂಟ ಮುಂತಾದ ಸ್ಕೀಂ ಕಾರ್ಯಕರ್ತೆಯರನ್ನು ಸರ್ಕಾರಗಳು ನಿರ್ಲಕ್ಷ ಮಾಡುತ್ತಿವೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರವು ಐಸಿಡಿಎಸ್, ಎನ್ಎಚ್ಎಂ, ಎಸ್ಎಸ್ಎ ಯೋಜನೆಗಳಿಗೆ ಅನುದಾನವನ್ನು ಕಡಿತಗೊಳಿಸುತ್ತಿದೆ. ಕನಿಷ್ಠ ವೇತನ, ಪಿಎಫ್-ಇಎಸ್ಐ, ನಿವೃತ್ತಿ ಪಿಂಚಣಿ ಇತ್ಯಾದಿ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿದರು.
ಬಳಿಕ ತಹಶೀಲ್ದಾರ್ಗೆ ಮನವಿ ಸಲ್ಲಿಸಲಾಯಿತು.
ಆಶಾ ಯೂನಿಯನ್, ಬಿಸಿಯೂಟ ಯೂನಿಯನ್, ಅಂಗನವಾಡಿ ಯೂನಿಯನ್, ವಸತಿನಿಲಯ ಕಾರ್ಮಿಕರ ಯೂನಿಯನ್ನ, ವಿದ್ಯುತ್ ನೌಕರರ ಯೂನಿಯನ್ನ ಪದಾಧಿಕಾರಿಗಳು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.